ಉಕ್ರೇನ್ ಕದನ: 12 ದಿನದಲ್ಲಿ 20 ಲಕ್ಷ ನಿರಾಶ್ರಿತರು !
ಜಿನೀವಾ: ಉಕ್ರೇನ್ ಮೇಲೆ ಫೆಬ್ರುವರಿ 24ರಂದು ರಷ್ಯಾ ಅತಿಕ್ರಮಣ ನಡೆಸಿದಾಗಿನಿಂದ ಸಂಘರ್ಷದಲ್ಲಿ ಇದುವರೆಗೆ ಕಳೆದ 12 ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ.
ವಿಶ್ವಸಂಸ್ಥೆಯ ಯುಎನ್‌ಎಚ್‌ಸಿಆರ್ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ 20,11,312 ಮಂದಿ ನಿರಾಶ್ರಿತರು ವೆಬ್‌ಸೈಟ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. ಇದು ಸೋಮವಾರ ದಾಖಲಾಗಿದ್ದ ನಿರಾಶ್ರಿತರ ಸಂಖ್ಯೆಗಿಂತ 2,76,244ರಷ್ಟು ಅಧಿಕ. ಇದು ಆಘಾತಕಾರಿ ಮೈಲುಗಲ್ಲು ಎಂದು ಯುಎನ್‌ಎಚ್‌ಸಿಆರ್ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.
ಈ ಅಂಕಿ ಅಂಶದ ಹಿಂದೆ ಇಪ್ಪತ್ತು ಲಕ್ಷ ಬೇರ್ಪಡಿಕೆಯ, ಆತಂಕದ ಮತ್ತು ಕಳೆದುಹೋದ ಕಥೆಗಳಿವೆ ಎಂದು ಅವರು ಬಣ್ಣಿಸಿದ್ದಾರೆ. ಈ ಕ್ರೂರ ಯುದ್ಧದಿಂದ ಈ ಕುಟುಂಬಗಳು ಊಹೆಗೂ ನಿಲುಕದಷ್ಟು ನರಳಿಕೆಗೆ ಒಳಗಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಷ್ಯನ್ ಸೇನೆ ಉಕ್ರೇನ್‌ನಲ್ಲಿ ಮತ್ತಷ್ಟು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ನಿರಾಶ್ರಿತರ ಹರಿವು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ರಷ್ಯಾ ದಾಳಿಗೆ ಮುನ್ನ 37 ದಶಲಕ್ಷ ಮಂದಿ ಉಕ್ರೇನ್‌ನಲ್ಲಿ ವಾಸವಿದ್ದರು. ಈಗಾಗಲೇ ದೇಶ ತೊರೆದವರು ಮಾತ್ರವಲ್ಲದೇ, ಲಕ್ಷಾಂತರ ಮಂದಿ ತಮ್ಮ ದೇಶದೊಳಗೇ ಮನೆ ಮಠಗಳನ್ನು ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ.
ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಪ್ರಕಾರ, ಇತರ ದೇಶಗಳ 10.3 ಲಕ್ಷ ಮಂದಿ ಕೂಡಾ ದೇಶದಿಂದ ಪಲಾಯನ ಮಾಡಿದ್ದಾರೆ. ಲಕ್ಷಾಂತರ ಮಂದಿ ಇನ್ನೂ ಉಕ್ರೇನ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಐಓಎಂ ವಕ್ತಾರ ಪಾಲ್ ದಿಲ್ಲಾನ್ ಹೇಳಿದ್ದು, ಇವರಲ್ಲಿ ಇತರ ದೇಶಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.