ನಂ.1 ಟೆಸ್ಟ್ ಆಲ್ ರೌಂಡರ್ ಆಗಿ ಹೊರಹೊಮ್ಮಿದ ರವೀಂದ್ರ ಜಡೇಜ

Update: 2022-03-09 10:15 GMT

ಹೊಸದಿಲ್ಲಿ: ಮೊಹಾಲಿಯಲ್ಲಿ  ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಗೆಲುವಿನಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ್ದ  ಭಾರತದ ರವೀಂದ್ರ ಜಡೇಜ  ಆಲ್‌ರೌಂಡರ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ.

ಜಡೇಜ  ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಅವರನ್ನು ಸ್ಥಾನಪಲ್ಲಟಗೊಳಿಸಿ ಅಗ್ರಸ್ಥಾನ ಪಡೆದರು. ಹೋಲ್ಡರ್ ಈಗ ಎರಡನೇ ಸ್ಥಾನದಲ್ಲಿದ್ದರೆ, ಜಡೇಜ ಅವರ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತೀಯ ಸ್ಪಿನ್ನರ್ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವುದು ಇದೇ ಮೊದಲಲ್ಲ ಹಾಗೂ  ಶ್ರೀಲಂಕಾ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ನಂತರ ಜಡೇಜ ಈ ಸಾಧನೆ ಮಾಡಿದ್ದಾರೆ.

ಭಾರತ ತಂಡದ ಆಲ್‌ರೌಂಡರ್ ಜಡೇಜ ಮೊದಲ   ಇನಿಂಗ್ಸ್ ಗನಲ್ಲಿ ಅಜೇಯ 175 ರನ್ ಗಳಿಸಿ ಭಾರತ 8 ವಿಕೆಟ್ ನಷ್ಟಕ್ಕೆ  574 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಲು ನೆರವಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಜಡೇಜ ಅವರು ಶ್ರೀಲಂಕಾದ ಮೊದಲ ಇನಿಂಗನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಲ್ಲದೆ,  ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗೆ 4 ವಿಕೆಟ್ ಪಡೆದಿದ್ದರು.  ಜಡೇಜ (ಔಟಾಗದೆ175) ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.7 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ  ಅತ್ಯಧಿಕ ಸ್ಕೋರ್ ಗಳಿಸಿದ ಭಾರತೀಯ ಎನಿಸಿಕೊಂಡಿದ್ದು, ಕಪಿಲ್ ದೇವ್ ಅವರ ದೀರ್ಘಾವಧಿಯ ದಾಖಲೆಯನ್ನು ಮುರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News