ವರದಕ್ಷಿಣೆ ನೀಡದಿದ್ದರೆ ಮದುವೆ ಬೇಡವೆಂದು ವಧುವಿನ ಮುಂದೆಯೇ ಪಟ್ಟುಹಿಡಿದ ವರ: ವೈರಲ್‌ ವೀಡಿಯೋದ ವಾಸ್ತವಾಂಶವೇನು?

Update: 2022-03-09 15:02 GMT
Photo: Screengrab

​ಹೊಸದಿಲ್ಲಿ: ವರದಕ್ಷಿಣೆ ನೀಡದ ಹೊರತು ಮದುವೆಯಾಗುವುದಿಲ್ಲ ಎಂದು ಮದುವೆಯ ವೇದಿಕೆಯಲ್ಲೇ ವರನೋರ್ವ ಹೇಳುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಬಿಹಾರದ ಹಳ್ಳಿಯೊಂದರಲ್ಲಿ ನಡೆದ ಮದುವೆಯಲ್ಲಿ ಈ ಪ್ರಸಂಗ ನಡೆದಿದೆ ಎಂದು ಪ್ರತಿಪಾದಿಸಿ ಈ ವಿಡಿಯೋ ವೈರಲ್‌ ಆಗಿತ್ತು. ಆದರೆ ಇದು ನಿಜವಾಗಿ ನಡೆದ ಘಟನೆಯಾಗಿರದೇ, ಇದೊಂದು ಜಾಗೃತಿ ಮೂಡಿಸುವ ನಟನಾ ವೀಡಿಯೋ ಆಗಿದೆ ಎಂದು altnews.in ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ. 

ತಾನು ಸರ್ಕಾರಿ ನೌಕರಿಯಲ್ಲಿರುವುದಾಗಿ ಹೇಳುವ ವರ ತನಗೆ ರಿಂಗ್‌, ಚೈನ್‌ ಹಾಗೂ ನಗದು ವರದಕ್ಷಿಣೆಯಾಗಿ ಬೇಕೆಂದು ಬೇಡುವುದು ವಿಡಿಯೋದಲ್ಲಿ ಕಂಡುಬಂದಿದೆ. ವರನನ್ನು ವಧು ಸಮಾಧಾನಪಡಿಸುವುದು ಕೂಡಾ ವಿಡಿಯೋದಲ್ಲಿ ಕಾಣಬಹುದು. @humlogindia ಖಾತೆಯಿಂದ ಈ ವಿಡಿಯೋವನ್ನು ಟ್ವಿಟರಿನಲ್ಲಿ ಮೊದಲ ಬಾರಿಗೆ ಟ್ವೀಟ್‌ ಮಾಡಲಾಗಿದೆ. 

ಮಹಾರಾಷ್ಟ್ರ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾ ನಿರ್ದೇಶನಾಲಯದ ಉಪನಿರ್ದೇಶಕ ದಯಾನಂದ ಕಾಂಬ್ಳೆ ಅವರು ಕೂಡಾ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, 8 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆಯಾಗಿದೆ. ಇದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಕೂಡ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಧಾರದ ಮೇಲೆ ಹಲವಾರು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ವೀಡಿಯೊದ ವರದಿಗಳನ್ನು ಪ್ರಕಟಿಸಿದವು. ತನ್ನ ಬೇಡಿಕೆಗಿಂತ ಕಡಿಮೆ ವರದಕ್ಷಿಣೆ ನೀಡಿದ ಕಾರಣ ವರನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ʼಜನಸತ್ತಾʼ (Jansatta) ಬರೆದಿದೆ. ಇದೇ ರೀತಿ ಇಂಡಿಯನ್ ಎಕ್ಸ್‌ಪ್ರೆಸ್, ಝೀ ನ್ಯೂಸ್, ಎನ್‌ಡಿಟಿವಿ, ಡಿಎನ್‌ಎ ಇಂಡಿಯಾ, ಟೈಮ್ಸ್ ಆಫ್ ಇಂಡಿಯಾ, ಲೋಕಮಾತ್, ಇಂಡಿಯಾ.ಕಾಮ್, ಐಬಿಸಿ 24, ನ್ಯೂಸ್ 18 ಕನ್ನಡ, ಸುವರ್ಣ ನ್ಯೂಸ್‌, ವಿಜಯ ಕರ್ನಾಟಕ ಮೊದಲಾದ ವೆಬ್‌ ಸುದ್ದಿ ತಾಣಗಳು ಇದನ್ನು ವರದಿ ಮಾಡಿವೆ.  
 
ಟೈಮ್ಸ್ ಆಫ್ ಇಂಡಿಯಾ ಅಂತರಾಷ್ಟ್ರೀಯ ಮಹಿಳಾ ದಿನದ ದಿನದಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, "ನೀವು ಆಕೆಗೆ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೀರಾ" ಎಂಬ ಪ್ರಶ್ನೆಯನ್ನು ಹಾಕಿದೆ.

“ಮದುವೆ ವೇದಿಕೆಯ ಮೇಲೆ ಒಬ್ಬ ಗಂಡಿನ ಪಕ್ಕದಲ್ಲಿ ಕುಳಿತಿರುವ ಅವಳು ತನ್ನನ್ನು ಹೆಂಡತಿಯಾಗಿ ಸ್ವೀಕರಿಸಲು ತನ್ನ ವರದಕ್ಷಿಣೆಯ ಮಾತುಕತೆಗೆ ಪ್ರಯತ್ನಿಸುತ್ತಿದ್ದಾಳೆ. ಆ ವ್ಯಕ್ತಿ ತನ್ನ ಅಕ್ರಮ ಬೇಡಿಕೆಯಲ್ಲಿ ಲಜ್ಜೆಗೆಟ್ಟಿದ್ದಾನೆ. ಇದು 2022 ರಲ್ಲಿ ಭಾರತದ ಕೆಲವು ಮಹಿಳೆಯರ ಸ್ಥಿತಿಯಾಗಿದೆ. ಹಾಗಾದರೆ, ನಿಮ್ಮ ಅಭಿಪ್ರಾಯವೇನು?” ಎಂದು ಟೈಮ್ಸ್‌ ಇಂಡಿಯಾ ವರದಿಯಲ್ಲಿ ಹೇಳಿದೆ. 
 
ವಾಸ್ತವಾಂಶವೇನು? 

ಈ ವಿಡಿಯೋದ ಸತ್ಯಾಸತ್ಯತೆಯನ್ನು Altnews.in ಬಯಲಿಗೆಳೆದಿದೆ. ಈ ವೇಳೆ ಈ ವಿಡಿಯೋ ನಿಜವಾದ ಮದುವೆಯಲ್ಲಿ ಚಿತ್ರೀಕರಿಸಿರುವದಲ್ಲ ಎಂಬ ಅಂಶ ಬಹಿರಂಗಗೊಂಡಿದೆ. ಈ ವಿಡಿಯೋವನ್ನು ಫೆಬ್ರವರಿ 25 ರಂದು ʼದಿವ್ಯ ವಿಕ್ರಮ್‌ʼ ಫೇಸ್‌ಬುಕ್‌ ಪೇಜಿನಲ್ಲಿ ಪೋಸ್ಟ್‌ ಮಾಡಲಾಗಿದ್ದು, 70 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲ್ಪಟ್ಟಿದೆ. ಈ ಪೇಜ್‌ ಜಾಡು ಹಿಡಿದು ಅದರ ನಿರ್ವಾಹಕ ವಿಕ್ರಮ್‌ ಮಿಶ್ರಾನನ್ನು ಆಲ್ಟ್‌ ನ್ಯೂಸ್‌ ತಂಡ ಸಂಪರ್ಕಿಸಿದೆ.

ವಿಕ್ರಮ್‌ ಮಿಶ್ರಾ ʼಜೈ ಮಿಥಿಲಾʼ ಎಂಬ ಚಾನೆಲ್‌ ಒಂದು ತನ್ನ ತಂಡದೊಂದಿಗೆ ನಡೆಸುತ್ತಿದ್ದು, ಈ ವಿಡಿಯೋದಲ್ಲಿರುವ ಇಬ್ಬರೂ ಕೂಡಾ ಕಲಾವಿದರು, ಅವರ ಹೆಸರು ಅಮಿತ್‌ ಹಾಗೂ ರಾಣಿ ಎಂದು ಅವರು ತಿಳಿಸಿದ್ದಾರೆ. 

ರಾಣಿ ಹಾಗೂ ಅಮಿತ್‌ ನಿಜಜೀವನದಲ್ಲಿ ಗಂಡ ಹೆಂಡತಿಯಾಗಿದ್ದು, ಇಂತಹ ಹಲವಾರು ವಿಡಿಯೋದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸದ್ಯ ವೈರಲ್‌ ಆಗಿರುವ ವಿಡಿಯೋ ಕೂಡಾ ಇಂತಹದ್ದೇ ಒಂದು ನಿರ್ಮಾಣ ಆಗಿದ್ದು, ನಿಜ ಮದುವೆಯಲ್ಲ ಎಂಬುದು ಸಾಬೀತಾಗಿದೆ. ಈ ವಾಸ್ತವಾಂಶವನ್ನು ಅರಿಯದೆ, ಹಲವಾರು ಮಾಧ್ಯಮಗಳು ಇದರ ಸುದ್ದಿಯನ್ನು ಬಿತ್ತರಿಸಿದೆ.

ಕೃಪೆ: Altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News