ಬಿಹಾರ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ; ಓರ್ವ ಮೃತ್ಯು, 6 ಮಂದಿಗೆ ಗಾಯ

Update: 2022-03-09 18:35 GMT

ಪಾಟ್ನಾ,ಮಾ.9: ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ಅಕ್ರಮ ಪಟಾಕಿ ತಯಾರಿಕೆಯ ಘಟಕವೊಂದರಲ್ಲಿ ಮಂಗಳವಾರ‌  ಸಂಭವಿಸಿದ ಭೀಕರ ಸ್ಫೋಟಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಹಾಗೂ ಇತರ ಆರು ಮಂದಿ ಗಾಯಗೊಂಡಿದ್ದಾರೆ. ಮೃತನನ್ನು ಅಲಿ ಮಿಯಾನ್ ಎಂದು ಗುರುತಿಸಲಾಗಿದೆ.

 
ಗೋಪಾಲ್ಗಂಜ್ ಜಿಲ್ಲೆಯ ಫೂಲ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬದುವಾ ಬಝಾರ್ನಲ್ಲಿ ಈ ಘಟನೆ ನಡೆದಿದೆ. ಪಟಾಕಿಗಳನ್ನು ತಯಾರಿಕೆಯ ಸಂದರ್ಭದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಸುಮಾರು 1 ಕಿ.ಮೀ. ವ್ಯಾಪ್ತಿಯವರೆಗೂ ಸ್ಫೋಟದ ತೀವ್ರತೆಯ ಅನುಭವವಾಗಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಫೋಟದ ಪರಿಣಾಮವಾಗಿ ಪಟಾಕಿಗಳ ತಯಾರಿಕೆಗಾಗಿ ಬಳಸಲಾಗುತ್ತಿದ್ದ ಗೋಡೆಗಳು ಹಾಗೂ ಕಟ್ಟಡದ ಛಾವಣಿಗೆ ತೀವ್ರ ಹಾನಿಯಾಗಿದೆ. ಸ್ಫೋಟದ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ರಾಜ್ಯವಾದ ಉತ್ತರಪ್ರದೇಶದ ಗೋರಖ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವಘಡದ ಸ್ಥಳಕ್ಕೆ ಅಪರಾಧವಿದಿ ವಿಧಾನ ತಜ್ಞರ ತಂಡವೊಂದು ಆಗಮಿಸಿದ್ದು, ಅಲ್ಲಿ ಅದು ಮಾದರಿಗಳನ್ನು ಸಂಗ್ರಹಿಸಿದೆ.

ಬಿಹಾರದಲ್ಲಿ ಅಕ್ರಮ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಕಳೆದ 10 ದಿನಗಳಲ್ಲಿ ಸಂಭವಿಸಿದ ಎರಡನೆ ಸ್ಫೋಟ ಇದಾಗಿದೆ. ಮಾರ್ಚ್ 5ರಂದು ಭಾಗಲ್ಪುರದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ನಡೆದ ಸ್ಫೋಟದಲ್ಲಿ 15 ಮಂದಿ ಮೃತಪಟ್ಟಿದ್ದರು ಹಾಗೂ ಇತರ 9 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News