ಐದು ರಾಜ್ಯಗಳ ಚುನಾವಣೆ ಮತ ಎಣಿಕೆ: ಮುಖ್ಯಾಂಶಗಳು
ಮತ ಎಣಿಕೆಯ ಕುರಿತ ಕ್ಷಣಕ್ಷಣದ ಮಾಹಿತಿಗಾಗಿ election.varthabharati.in ಕ್ಲಿಕ್ ಮಾಡಿ
ಹೊಸದಿಲ್ಲಿ: ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಕನಿಷ್ಠ ಮೂರು ದೊಡ್ಡ ರಾಜ್ಯಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಉತ್ತರಪ್ರದೇಶ, ಗೋವಾ ಹಾಗೂ ಉತ್ತರಾಖಂಡಗಳಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಪಾರಮ್ಯ ಮೆರೆದಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದ್ದು, ಐದು ರಾಜ್ಯಗಳಲ್ಲಿ ಮತ ಎಣಿಕೆಗೆ 50 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1,200ಕ್ಕೂ ಹೆಚ್ಚು ಎಣಿಕೆ ಕೊಠಡಿಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ಎಲ್ಲ ಕೇಂದ್ರಗಳಲ್ಲಿ ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದ್ದು, ಈಗಾಗಲೇ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಮತಯಂತ್ರಗಳಲ್ಲಿ ವಂಚನೆ ಮತ್ತು ಇವಿಎಂಗಳ ತಿರುಚುವಿಕೆ ಆರೋಪಗಳು ಕೇಳಿಬಂದಿದ್ದು, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಧಿಕಾರಿಗಳು ಅಕ್ರಮವಾಗಿ ಮತಯಂತ್ರಗಳನ್ನು ಸಾಗಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಆಪಾದಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ವಾರಣಾಸಿಯಲ್ಲಿ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.