×
Ad

ಸರ್ಕಾರಿ ನೀತಿ ವಿರುದ್ಧದ ಅಭಿಪ್ರಾಯ ದೇಶದ್ರೋಹ ಅಲ್ಲ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನಾಗೇಶ್ವರ ರಾವ್

Update: 2022-03-10 08:08 IST
ಎನ್.ನಾಗೇಶ್ವರ ರಾವ್

ಹೊಸದಿಲ್ಲಿ: ಸರ್ಕಾರದ ನೀತಿ ಅಥವಾ ಕಾರ್ಯವೈಖರಿ ವಿರುದ್ಧ ಮಾಡುವ ಯಾವುದೇ ಭಾಷಣ ದೇಶದ್ರೋಹವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ನಾಗೇಶ್ವರ ರಾವ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಮೂಲಭೂತ ಹಕ್ಕುಗಳ ಪರವಾದ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿರುವ ಅವರು, ತನ್ನ ವಿರುದ್ಧದ ಟೀಕೆ ಅಥವಾ ಅಭಿಪ್ರಾಯಗಳ ವಿರುದ್ಧ ಪ್ರತಿಕ್ರಿಯಿಸುತ್ತಿದ್ದು, ಇದು ಸೂಕ್ತ ವಿಧಾನ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗುಂಪುಗಳಲ್ಲಿ ದ್ವೇಷಭಾವನೆ ಹರಡುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಎಸಗಿದ ದ್ವೇಷ ಭಾಷಣವನ್ನು ಗಮನಿಸಬೇಕು ಮತ್ತು ಭಾರತೀಯ ದಂಡಸಂಹಿತೆಯ ಕೆಲ ಸೆಕ್ಷನ್‌ಗಳಿಗೆ ಸೂಕ್ತ ತಿದ್ದುಪಡಿಯ ಪ್ರಸ್ತಾವ ಇದ್ದು, ಇದುವರೆಗೂ ಅದನ್ನು ಮಾಡಿಲ್ಲ ಎಂದು ಅವರು ಹೇಳಿದರು.

ಸೋಲಿ ಸೊರಾಬ್ಜಿ ಸ್ಮಾರಕ ಉಪನ್ಯಾಸ ನೀಡಿದ ಅವರು, ಸಮಾಜ ಮಾಧ್ಯಮದ ಮೇಲೆ ಕಾರ್ಯಾಂಗದ ಹಸ್ತಕ್ಷೇಪದ ಬಗ್ಗೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಆಧಾರದಲ್ಲಿ ಇಂಟರ್‌ನೆಟ್ ಕಡಿತಗೊಳಿಸುವ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ದೇಶದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಖಾತರಿಪಡಿಸುವುದು ಸರ್ಕಾರದ ಕರ್ತವ್ಯ. ಯಾರೂ ಕಾನೂನಿಗಿಂತ ಮೇಲಲ್ಲ ಎನ್ನುವುದನ್ನು ಸುಪ್ರೀಂಕೋರ್ಟ್ ಪದೇ ಪದೇ ನೆನಪಿಸುತ್ತಿದೆ ಎಂದು ವಿವರಿಸಿದರು.

"ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡದೇ, ಪ್ರಜಾಪ್ರಭುತ್ವಕ್ಕೆ ಮೌಲ್ಯ ಇಲ್ಲ. ಆದ್ದರಿಂದ ಚರ್ಚೆಗಳು ಮತ್ತು ಭಾಷಣಗಳು ಹಲವು ತೀರ್ಪುಗಳಿಗೆ ಹಿನ್ನೆಲೆಯಾಗಿವೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News