​ಗೋವಾದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಮನೋಹರ್‌ ಪರಿಕ್ಕರ್‌ ಪುತ್ರನಿಗೆ ಸೋಲುಣಿಸಿದ ಬಿಜೆಪಿ ಅಭ್ಯರ್ಥಿ !

Update: 2022-03-10 10:23 GMT
Photo: Narayan Pissurlekar/thewire.in

ಪಣಜಿ: ಮಾಜಿ ರಕ್ಷಣಾ ಸಚಿವ, ಮಾಜಿ ಗೋವಾ ಸಿಎಂ ಹಾಗೂ ಬಿಜೆಪಿ ಮುಖಂಡ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಬಿಜೆಪಿಯ ಅಟಾನಾಸಿಯೊ ಮಾನ್ಸೆರೇಟ್ ರ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಮಾನ್ಸೆರೇಟ್, ತಮ್ಮ ಗೆಲುವಿನ ಅಂತರದಿಂದ ಸಂತೋಷವಾಗಿಲ್ಲ ಮತ್ತು ಬಿಜೆಪಿ ಬೆಂಬಲಿಗರು ತನಗೆ ಮತ ಹಾಕಲಿಲ್ಲ ಎಂದು ಹೇಳಿದ್ದಾರೆ.

"ಈ ವಿಚಾರವನ್ನು ಬಿಜೆಪಿ ನಾಯಕರಿಗೆ ಹೇಳಿದ್ದೇನೆ, ಭವಿಷ್ಯದಲ್ಲಿ ಎಚ್ಚರ ವಹಿಸಬೇಕು, ರಾಜ್ಯ ಬಿಜೆಪಿ ಘಟಕ ಜನರಿಗೆ ಸರಿಯಾದ ಸಂದೇಶ ರವಾನಿಸಿಲ್ಲ, ಬಿಜೆಪಿಯ ಎಲ್ಲ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ನಾನು ಬಿಜೆಪಿ ಜತೆಗಿದ್ದೇನೆ" ಎಂದರು.

ಬಿಜೆಪಿ ಪಕ್ಷವು ಪಣಜಿಯಿಂದ ಮಾನ್ಸೆರೇಟ್ ರನ್ನು ಕಣಕ್ಕಿಳಿಸಿದ ಬಳಿಕ ಉತ್ಪಲ್ ಪರಿಕ್ಕರ್  ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಇಂಜಿನಿಯರ್ ಆಗಿರುವ ಉತ್ಪಲ್ ಪರಿಕ್ಕರ್ ಅವರು ಪಣಜಿಯಲ್ಲಿ ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಹೋರಾಡಲು ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟಿದ್ದರು. ವಿಶೇಷವೆಂದರೆ ಅವರ ತಂದೆ ಮನೋಹರ್‌ ಪರಿಕ್ಕರ್ ಗೋವಾದಲ್ಲಿ ಮತ್ತು ನಿರ್ದಿಷ್ಟವಾಗಿ ಪಣಜಿ ಕ್ಷೇತ್ರದಲ್ಲಿ‌ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದರು.

ಮೂರು ಬಾರಿ ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು 25 ವರ್ಷಗಳ ಕಾಲ ಪಣಜಿ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. 2019 ರಲ್ಲಿ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಹುಕಾಲದ ಪ್ರತಿಸ್ಪರ್ಧಿ ಮಾನ್ಸೆರೇಟ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಮಾನ್ಸೆರೇಟ್ ಬಳಿಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News