ರಶ್ಯದ ಪ್ರಮುಖ ಉದ್ಯಮಿಗಳ ಆಸ್ತಿ ಸ್ಥಂಭನಕ್ಕೆ ಬ್ರಿಟನ್ ಸೂಚನೆ
ಲಂಡನ್, ಮಾ.10: ಇಂಗ್ಲೆಂಡಿನ ವೃತ್ತಿಪರ ಫುಟ್‌ಬಾಲ್ ಕ್ಲಬ್ ಚೆಲ್ಸಿಯಾದ ಮಾಲಕ ರೋಮನ್ ಅಬ್ರಮೊವಿಚ್ ಸಹಿತ ರಶ್ಯದ 7 ಪ್ರಮುಖ ಉದ್ಯಮಿಗಳು ಬ್ರಿಟನ್‌ನಲ್ಲಿ ಹೊಂದಿರುವ ಆಸ್ತಿಯನ್ನು ಸ್ಥಂಭನಗೊಳಿಸಿ ಹಾಗೂ ಅವರು ಬ್ರಿಟನ್‌ಗೆ ಪ್ರಯಾಣಿಸುವುದನ್ನು ನಿಷೇಧಿಸಿ ಬ್ರಿಟನ್ ಸರಕಾರ ಗುರುವಾರ ಆದೇಶ ಜಾರಿಗೊಳಿಸಿದೆ.
ಪ್ರಮುಖ ಉದ್ಯಮಿ ಒಲೆಗ್ ಡೆರಿಪಸ್ಕ, ರೊಸ್‌ನೆಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಗೋರ್ ಸೆಚಿನ್, ಗಾರ್ಪ್ರೋಮ್‌ನ ಮುಖ್ಯಸ್ಥ ಅಲೆಕ್ಸಿ ಮಿಲರ್, ವಿಟಿಬಿ ಬ್ಯಾಂಕ್ ಅಧ್ಯಕ್ಷ ಆ್ಯಂಡ್ರೈ ಕೋಸ್ಟಿನ್, ಟ್ರಾನ್ಸ್‌ನೆಫ್ಟ್ ಮುಖ್ಯಸ್ಥ ನಿಕೊಲಾಯ್ ಟೊಕರೆವ್, ಬ್ಯಾಂಕ್ ರೊಸ್ಸಿಯಾ ಅಧ್ಯಕ್ಷ ಡಿಮಿಟ್ರಿ ಲೆಬೆಡೆವ್ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವರು ರಶ್ಯ ಸರಕಾರದ ಆಪ್ತವಲಯದಲ್ಲಿರುವ ಉದ್ಯಮಿಗಳು. ಇಗೊರ್ ಸೆಚಿನ್ ರಶ್ಯ ಅಧ್ಯಕ್ಷರ ಬಲಗೈ ಬಂಟ. ಇವರೆಲ್ಲರ ಆಸ್ತಿಯ ಒಟ್ಟು ಮೌಲ್ಯ ಸುಮಾರು 19.2 ಬಿಲಿಯನ್ ಡಾಲರ್ ಎಂದು ಬ್ರಿಟನ್ ಸರಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಶ್ಯದ ಉದ್ಯಮಿಗಳ ಆಸ್ತಿಯ ಸ್ಥಂಭನ ಕ್ರಮವು ಉಕ್ರೇನ್ ಜನತೆಗೆ ಬ್ರಿಟನ್ ನೀಡುತ್ತಿರುವ ನೆರವಿನ ಮತ್ತೊಂದು ನಿದರ್ಶನವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಸರಕಾರಕ್ಕೆ ಅಥವಾ ಪ್ರಭುತ್ವಕ್ಕೆ ನಿಕಟವಾಗಿರುವ ಉದ್ಯಮಿಗಳಿಗೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ ಎಂಬುದನ್ನು ಈ ಉಪಕ್ರಮ ತೋರಿಸಿಕೊಟ್ಟಿದೆ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್ ಹೇಳಿದ್ದಾರೆ.
2003ರಲ್ಲಿ ಚೆಲ್ಸಿಯಾ ಫುಟ್ಬಾಲ್ ಕ್ಲಬ್ ಅನ್ನು ಖರೀದಿಸಿದ್ದ ಅಬ್ರಮೊವಿಚ್, ಅದನ್ನು ಮಾರಾಟ ಮಾಡುವುದಾಗಿ ಕಳೆದ ವಾರ ಘೋಷಿಸಿದ್ದರು. ಅಬ್ರಮೊವಿಚ್ ಅವರ ಆಸ್ತಿಯ ನಿವ್ವಳ ಮೌಲ್ಯ 12.3 ಬಿಲಿಯನ್ ಡಾಲರ್ ಎಂದು ಬ್ರಿಟನ್ ಘೋಷಿಸಿದೆ. ಆಸ್ತಿಯನ್ನು ಸ್ಥಂಭನಗೊಳಿಸಿದ್ದರೂ, ಚೆಲ್ಸಿಯಾ ತಂಡಕ್ಕೆ ಫುಟ್ಬಾಲ್ ಟೂರ್ನಿಯಲ್ಲಿ ಹಾಗೂ ಕ್ರೀಡೆಗೆ ಸಂಬಂಧಿಸಿದ ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಸರಕಾರ ಸೂಚಿಸಿದೆ.