ಅಣುಸ್ಥಾವರದ ಸುರಕ್ಷತೆಯ ಕುರಿತ ಸಭೆಗೆ ಸಿದ್ಧ, ಆದರೆ ಚೆರ್ನೊಬಿಲ್ ನಲ್ಲಿ ಬೇಡ : ರಷ್ಯಾ

Update: 2022-03-10 18:47 GMT

ಮಾಸ್ಕೊ, ಮಾ.10: ಉಕ್ರೇನ್ ನ ಅಣುಸ್ಥಾವರದ ಸುರಕ್ಷತೆಯನ್ನು ಖಾತರಿಪಡಿಸಲು ತ್ರಿಪಕ್ಷೀಯ ಸಭೆ ನಡೆಸುವ ಅಂತರಾಷ್ಟ್ರೀಯ ಪರಮಾಣು ಇಂಧನ ನಿಗಾ ಸಮಿತಿ(ಐಎಇಎ)ಯ ಮುಖ್ಯಸ್ಥರ ಯೋಜನೆಗೆ ತನ್ನ ಸಹಮತವಿದೆ. ಆದರೆ ಚೆರ್ನೋಬಿಲ್ ನಲ್ಲಿ ಮಾತುಕತೆ ಬೇಡ ಎಂದು ರಷ್ಯಾ ಗುರುವಾರ ಸ್ಪಷ್ಟಪಡಿಸಿದೆ.

ಅತ್ಯಂತ ಸುಧಾರಿತ ಮತ್ತು ಆಧುನಿಕ ಪರಮಾಣು ವ್ಯವಸ್ಥೆ ಮತ್ತು ಘಟಕಗಳನ್ನು ಹೊಂದಿರುವ ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣ ಅತ್ಯಂತ ಆತಂಕಕ್ಕೆ ಕಾರಣವಾಗಿದೆ. ರಷ್ಯಾ ಮತ್ತು ಉಕ್ರೇನ್ ಪಡೆ ಕೆಲವು ಮೊಬೈಲ್ ನೆಟ್ವರ್ಕ್ ಹಾಗೂ ಅಣುಸ್ಥಾವರದ ಇಂಟರ್ನೆಟ್ ವ್ಯವಸ್ಥೆ ಸ್ಥಗಿತಗೊಳಿಸಿರುವುದು ಕಳವಳಕಾರಿಯಾಗಿದೆ ಎಂದು ಐಎಇಎ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಹೇಳಿದ್ದಾರೆ. ಕ್ರಿಮಿಯಾ ಪ್ರಾಂತದ ಬಳಿಯ ಝಪೊರಿಝಿಯಾದಲ್ಲಿರುವ ಯುರೋಪ್ ನ ಅತೀ ದೊಡ್ಡ ಪರಮಾಣು ಸ್ಥಾವರ ಸಹಿತ 4 ಪರಮಾಣು ಸ್ಥಾವರಗಳು ಉಕ್ರೇನ್ ನಲ್ಲಿವೆ. ಕಳೆದ ವಾರ ಝಪೋರಿಝಿಯ ಅಣುಸ್ಥಾವರದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು.

ಚೆರ್ನೋಬಿಲ್ ನಲ್ಲಿ ತ್ರಿಪಕ್ಷೀಯ ಸಭೆ ನಡೆಯಬೇಕೆಂಬ ಪ್ರಸ್ತಾವವನ್ನು ಗ್ರಾಸಿ ಮುಂದಿರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಐಎಇಎ ರಷ್ಯಾ ಪ್ರತಿನಿಧಿ ಮಿಖಾಯಿಲ್ ಉಲ್ಯನೋವ್ ‘ ತ್ರಿಪಕ್ಷೀಯ ಸಭೆ ನಡೆಯಬೇಕೆಂಬ ಪ್ರಸ್ತಾವನೆಗೆ ನಮ್ಮ ಸಹಮತವಿದೆ. ಉಕ್ರೇನ್ ಕೂಡಾ ಸಹಕರಿಸುತ್ತದೆ ಎಂದು ನಿರೀಕ್ಷಿಸುತ್ತೇವೆ . ಆದರೆ ಇಂತಹ ಸಭೆಗೆ ಚೆರ್ನೋಬಿಲ್ ಉತ್ತಮ ಸ್ಥಳವಲ್ಲ. ವಿಶ್ವದಲ್ಲಿ ಹಲವಾರು ರಾಜಧಾನಿಗಳಿವೆ’ ಎಂದಿದ್ದಾರೆ.

ಈ ಮಧ್ಯೆ, ರವಿವಾರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಚೆರ್ನೋಬಿಲ್ ನಲ್ಲಿ ತ್ರಿಪಕ್ಷೀಯ ಮಾತುಕತೆಯ ಐಎಇಎ ಯೋಜನೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News