ಟರ್ಕಿಯಲ್ಲಿ ರಷ್ಯಾ, ಉಕ್ರೇನ್ ವಿದೇಶ ಸಚಿವರ ಸಭೆ

Update: 2022-03-10 18:49 GMT
photo pti

ಅಂಕಾರ, ಮಾ.10: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಆರಂಭವಾದ ಬಳಿಕ ಇದೇ ಪ್ರಥಮ ಬಾರಿಗೆ ರಷ್ಯಾ ಮತ್ತು ಉಕ್ರೇನ್ ನ ವಿದೇಶ ವ್ಯವಹಾರ ಸಚಿವರು ಪರಸ್ಪರ ಭೇಟಿಯಾಗಿ ಸಂಧಾನ ಮಾತುಕತೆ ನಡೆಸಲು ಟರ್ಕಿ ದೇಶ ವೇದಿಕೆ ಕಲ್ಪಿಸಿದೆ.

ಟರ್ಕಿಯ ದಕ್ಷಿಣ ಪ್ರಾಂತ ಅಂಟಾಲ್ಯದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ವೇದಿಕೆಯ ಸಮಾವೇಶದ ನೇಪಥ್ಯದಲ್ಲಿ ನಡೆಯುತ್ತಿರುವ ಈ ಬಹುನಿರೀಕ್ಷಿತ ಉನ್ನತ ಮಟ್ಟದ ಸಭೆಯಲ್ಲಿ ರಷ್ಯಾದ ವಿದೇಶ ಸಚಿವ ಸೆರ್ಗೈ ಲಾವ್ರೋವ್ ಹಾಗೂ ಉಕ್ರೇನ್ ವಿದೇಶ ಸಚಿವ ಡಿಮಿಟ್ರೊ ಕ್ಯುಲೆಬಾ ನಡುವಿನ ಮಾತುಕತೆಯಲ್ಲಿ ಕದನ ವಿರಾಮದ ಕಡೆಗೆ ಮಹತ್ವದ ಮುನ್ನಡೆ ಸಾಧ್ಯವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಸಭೆಗೂ ಮುನ್ನ ಸುದ್ಧಿಗಾರರ ಜತೆ ಮಾತನಾಡಿದ ಕ್ಯುಲೆಬಾ, ಪ್ರಚಾರದ ದೃಷ್ಟಿಕೋನದಿಂದ ಅಲ್ಲ, ನಂಬಿಕೆ, ವಿಶ್ವಾಸದಿಂದ ಸಭೆಯಲ್ಲಿ ಪಾಲ್ಗೊಳ್ಳುವಂತೆ ರಷ್ಯನ್ ಮುಖಂಡರನ್ನು ಆಗ್ರಹಿಸಿದ್ದಾರೆ. ಮಾತುಕತೆಯ ಬಗ್ಗೆ ನನ್ನ ನಿರೀಕ್ಷೆ ಹೆಚ್ಚೇನೂ ಇಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಕದನ ವಿರಾಮ, ನಮ್ಮ ಪ್ರದೇಶಗಳನ್ನು ಸ್ವತಂತ್ರಗೊಳಿಸುವುದು ಮತ್ತು ಎಲ್ಲಾ ಮಾನವೀಯ ಬಿಕ್ಕಟ್ಟನ್ನು ಇತ್ಯರ್ಥಗೊಳಿಸುವ ಬಗ್ಗೆ ನಾವು ಆಸಕ್ತರಾಗಿದ್ದೇವೆ ಎಂದವರು ಹೇಳಿದ್ದಾರೆ.

ಮಾತುಕತೆಗೆ ಸದಾ ಸಿದ್ಧ. ಆದರೆ ನೇಟೋ ಗುಂಪಿಗೆ ಸೇರ್ಪಡೆಗೊಳ್ಳುವ ತನ್ನ ಹಂಬಲವನ್ನು ಉಕ್ರೇನ್ ಕೈಬಿಡಬೇಕು ಮತ್ತು ನಿರ್ಲಿಪ್ತ ನಿಲುವು ತಳೆಯಬೇಕು ಎಂಬ ಷರತ್ತಿನಲ್ಲಿ ರಾಜಿಗೆ ಸಾಧ್ಯವೇ ಇಲ್ಲ ಎಂದು ರಶ್ಯ ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಿನ ಈ ಹಿಂದಿನ 3 ಸುತ್ತಿನ ಮಾತುಕತೆ ವಿಫಲವಾಗಿದೆ.

ಉಭಯ ದೇಶಗಳನ್ನು ಮತ್ತೊಂದು ಸುತ್ತಿನ ಮಾತುಕತೆಗೆ ಒಟ್ಟು ಸೇರಿಸಿರುವುದು ಶಾಂತಿ ಮಾತುಕತೆಯತ್ತ ಪ್ರಮುಖ ಹೆಜ್ಜೆಯಾಗಿದೆ. ಶಾಂತಿ ಮಾತುಕತೆಯ ಬಗ್ಗೆ ಈ ಹಿಂದೆ ನಿರಾಸಕ್ತಿ ಹೊಂದಿದ್ದ ರಷ್ಯಾ ಕೂಡಾ ತನ್ನ ನಿಲುವನ್ನು ಬದಲಾಯಿಸುತ್ತಿದೆ. ಮಾತುಕತೆ ಫಲಪ್ರದವಾಗಲಿದೆ ಎಂಬ ವಿಶ್ವಾಸವಿದೆ ಎಂದು ಟರ್ಕಿಯ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಎರಡೂ ದೇಶಗಳೊಂದಿಗೆ ಸಮುದ್ರ ಗಡಿಯನ್ನು ಹೊಂದಿರುವ ಟರ್ಕಿ ಉಭಯ ದೇಶಗಳ ಜತೆಗೂ ಉತ್ತಮ ಸಂಬಂಧ ಹೊಂದಿದೆ. ರಷ್ಯಾದ ಆಕ್ರಮಣ ಸ್ವೀಕಾರಾರ್ಹವಲ್ಲ ಎಂದಿದ್ದ ಟರ್ಕಿ, ಆದರೆ ಅದರ ವಿರುದ್ಧದ ನಿರ್ಬಂಧಕ್ಕೆ ತನ್ನ ಬೆಂಬಲವಿಲ್ಲ ಎಂದಿದೆ.

ಸಂಧಾನ ಮಾತುಕತೆ ಪುನರಾರಂಭಿಸುವಂತೆ ಟರ್ಕಿ ಅಧ್ಯಕ್ಷ ಎರ್ದೊಗನ್ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ರಷ್ಯಾದ ಮನ ಒಲಿಸಲು ಕಳೆದ ವಾರ ನಿರಂತರ ಪ್ರಯತ್ನ ನಡೆಸಿದ್ದರು. ಇಬ್ಬರು ಮುಖಂಡರೂ ರಷ್ಯಾ ಅಧ್ಯಕ್ಷ ಪುಟಿನ್ ಗೆ ಕರೆ ಮಾಡಿ ಶಾಂತಿ ಮಾತುಕತೆಗೆ ಮುಂದಾಗುವಂತೆ ವಿನಂತಿಸಿದ್ದರು ಎಂದು ಮೂಲಗಳು ಹೇಳಿವೆ.
/****/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News