ಉಕ್ರೇನ್ ಗೆ ನೆರವಿನ ಪ್ಯಾಕೇಜ್, ರಶ್ಯದ ತೈಲ ನಿಷೇಧಕ್ಕೆ ಅಮೆರಿಕದ ಸಂಸತ್ತು ಅನುಮೋದನೆ

Update: 2022-03-10 18:54 GMT

ವಾಷಿಂಗ್ಟನ್, ಮಾ.10: ರಶ್ಯದ ಆಕ್ರಮಣದ ವಿರುದ್ಧ ಹೋರಾಡುತ್ತಿರುವ ಉಕ್ರೇನ್ಗೆ 13.6 ಬಿಲಿಯನ್ ಡಾಲರ್ ಮೌಲ್ಯದ ನೆರವಿನ ಪ್ಯಾಕೇಜ್ ಹಾಗೂ ರಶ್ಯದ ತೈಲ ಆಮದು ನಿಷೇಧಿಸುವ ನಿರ್ಣಯಕ್ಕೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ.

ಅಮೆರಿಕ ಸಂಸತ್ತಿನ ಕೆಳಮನೆ ‘ಹೌಸ್ ಆಫ್ ರೆಪ್ರೆಸೆಂಟೇಟಿವ್’ ಬುಧವಾರ ಈ ನಿರ್ಣಯವನ್ನು ಅನುಮೋದಿಸಿತ್ತು. ಕಳೆದ ವಾರ ಸಂಸತ್ತಿಗೆ ಮಾಹಿತಿ ನೀಡಿದ್ದ ನೆರವಿನ ಪ್ಯಾಕೇಜ್ ಮೊತ್ತಕ್ಕಿಂತ 10 ಬಿಲಿಯನ್ ಡಾಲರ್ ಹೆಚ್ಚಳದ ಪ್ಯಾಕೇಜ್ ಗೆ ಅನುಮೋದನೆ ದೊರಕಿದೆ. 13.6 ಬಿಲಿಯನ್ ಡಾಲರ್ ಮೊತ್ತದಲ್ಲಿ ಸುಮಾರು 6.5 ಬಿಲಿಯನ್ ಡಾಲರ್ ಮೊತ್ತವನ್ನು ಉಕ್ರೇನ್ ಗೆ ಶಸ್ತ್ರಾಸ್ತ್ರ ಹಾಗೂ ಇತರ ನೆರವು ಒದಗಿಸಲು ಪೆಂಟಗಾನ್(ಅಮೆರಿಕದ ರಕ್ಷಣಾ ವಿಭಾಗ)ಗೆ, ಸುಮಾರು 6.7 ಬಿಲಿಯನ್ ಡಾಲರ್ ಮೊತ್ತವನ್ನು ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡಿರುವ ಮಿತ್ರರಾಷ್ಟ್ರಗಳಿಗೆ ಒದಗಿಸಲಾಗುವುದು . ಮುಂದಿನ ದಿನದಲ್ಲಿ ಉಕ್ರೇನ್ನ ಮರುನಿರ್ಮಾಣ ಕಾರ್ಯದಲ್ಲಿ ನಾವೆಲ್ಲಾ (ನೇಟೊ ಮಿತ್ರರಾಷ್ಟ್ರಗಳು) ಇನ್ನಷ್ಟು ನೆರವು ಒದಗಿಸುವ ಅಗತ್ಯವಿದೆ ಎಂದು ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
ಜತೆಗೆ, ರಶ್ಯದಿಂದ ತೈಲ ಆಮದನ್ನು ನಿಷೇಧಿಸುವ ನಿರ್ಣಯವನ್ನು ಸಂಸತ್ತು 414-17 ಮತಗಳ ದಾಖಲೆ ಅಂತರದಿಂದ ಅಂಗೀಕರಿಸಿದೆ. ವಿಶ್ವ ವ್ಯಾಪಾರ ಸಂಘಟನೆಯಂತಹ ಕೆಲವು ಪ್ರಮುಖ ಅಂತರಾಷ್ಟ್ರೀಯ ವ್ಯಾಪಾರ ಸಂಘಟನೆಯಿಂದ ರಶ್ಯವನ್ನು ದೂರ ಇರಿಸುವ ಪ್ರಸ್ತಾವನೆಗೂ ಸಂಸತ್ ಅನುಮೋದನೆ ನೀಡಿದೆ. 15.6 ಬಿಲಿಯನ್ ಡಾಲರ್ ಮೊತ್ತದ ಕೋವಿಡ್-19 ನೆರವು ಉಪಕ್ರಮಗಳಿಗೆ ಸಂಬಂಧಿಸಿದ ಅನುದಾನಕ್ಕೂ ಸಂಸತ್ ಅನುಮೋದನೆ ನೀಡಿದೆ.
ಈ ಮಧ್ಯೆ, ಅಮೆರಿಕ ಸರಕಾರದ ಯೋಜನೆಗಳ ಕಾರ್ಯನಿರ್ವಹಣೆಯನ್ನು ಸೆಪ್ಟಂಬರ್ 30ರವರೆಗೆ ಮುಂದುವರಿಸಿಕೊಂಡು ಹೋಗಲು ಅಗತ್ಯವಿರುವ 1.5 ಟ್ರಿಲಿಯನ್ ಡಾಲರ್ ಮೊತ್ತದ ಬಿಲ್ ಗೆ ಸಂಸತ್ತಿನ ಕೆಳಮನೆ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News