ಮಾ.16ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಆಪ್ ನ ಭಗವಂತ ಮಾನ್ ಪ್ರಮಾಣವಚನ

Update: 2022-03-11 15:41 GMT

ಚಂಡಿಗಡ, ಮಾ.11: ಪಂಜಾಬಿನ ನಿಯೋಜಿತ ಮುಖ್ಯಮಂತ್ರಿ,‌ ಆಪ್ ನ ಭಗವಂತ ಮಾನ್ ಅವರು ಮಾ.16ರಂದು ಪ್ರಮಾನ ವಚನವನ್ನು ಸ್ವೀಕರಿಸಲಿದ್ದಾರೆ. ತನ್ನ ಪ್ರಮಾಣ ವಚನ ಸ್ವೀಕಾರ ಸಮಾರಂಭವು ರಾಜಭವನದ ಬದಲು ಸ್ವಾತಂತ್ರ ಹೋರಾಟಗಾರ ಭಗತ ಸಿಂಗ್ ಅವರ ಹುಟ್ಟೂರು ನವಾನ್ಶಹರ ಜಿಲ್ಲೆಯ ಖಟಕರಕಲಾನ್ ಗ್ರಾಮದಲ್ಲಿ ನಡೆಯಲಿದೆ ಎಂದು ಮಾನ್ ಗುರುವಾರ ತಿಳಿಸಿದ್ದರು.

ಈ ನಡುವೆ ಶುಕ್ರವಾರ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾದ ಮಾನ್,ತನ್ನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿದರು. ಉಭಯ ನಾಯಕರು ಮಾ.13ರಂದು ಅಮೃತಸರದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಆಪ್ನ ಏಕೈಕ ಸಂಸದರಾಗಿರುವ ಮಾನ್ ತನ್ನ ಸಂಗ್ರೂರ್ ಲೋಕಸಭಾ ಕ್ಷೇತ್ರದ ಧುರಿಯಲ್ಲಿ ಕಾಂಗ್ರೆಸ್ನ ದಲ್ವೀರ್ ಸಿಂಗ್ ಗೋಲ್ಡಿಯವರನ್ನು 58,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇದು ವಿಧಾನಸಭೆಗೆ ಅವರ ಮೂರನೆ ಸ್ಪರ್ಧೆಯಾಗಿದ್ದು, 2011ರಲ್ಲಿ ಲೆಹ್ರಾ ಮತ್ತು 2017ರಲ್ಲಿ ಜಲಾಲಾಬಾದ್ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದರು.

2022ರ ವಿಧಾನಸಭಾ ಚುನಾವಣೆಯಲಿ ಗೆಲ್ಲುವ ಮುನ್ನ ಮಾನ್ ಸಂಗ್ರೂರ್ನಿಂದ ಎರಡು ಸಲ ಲೋಕಸಭೆಗೆ ಆಯ್ಕೆಯಾಗಿದ್ದರು. 117 ಸದಸ್ಯಬಲದ ಪಂಜಾಬ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಆಪ್ ಗೆದ್ದಿದ್ದರೆ 18 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ತನ್ನ ಅರ್ಧಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದೆ. ಅಕಾಲಿ ದಳಕ್ಕೆ ಕೇವಲ ಮೂರು ಸ್ಥಾನಗಳು ದಕ್ಕಿದ್ದರೆ ಬಿಜೆಪಿ ಎರಡೇ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆಪ್ನ ಎದುರು ಸ್ಪರ್ಧಿಸಿದ್ದ ಘಟಾನುಘಟಿ ರಾಜಕಾರಣಿಗಳು ಸೋಲನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News