ಇಂಡೋನೇಶ್ಯ, ಸೇಷೆಲ್ಸ್ ನಲ್ಲಿ ಬಂಧಿಸಲ್ಪಟ್ಟಿರುವ ಮೀನುಗಾರರ ಬಿಡುಗಡೆಗೆ ಕೇಂದ್ರಕ್ಕೆ ಎಂ.ಕೆ.ಸ್ಟಾಲಿನ್ ಆಗ್ರಹ

Update: 2022-03-11 15:46 GMT

ಚೆನ್ನೈ, ಮಾ.11: ಇಂಡೋನೇಷ್ಯ ಮತ್ತು ಸೇಷೆಲ್ಸ್ ನ ಅಧಿಕಾರಿಗಳಿಂದ ಮಾ.7ರಂದು ಬಂಧಿಲ್ಪಟ್ಟಿರುವ ಮೀನುಗಾರರನ್ನು ಬಿಡುಗಡೆಗೊಳಿಸಲು ಕ್ರಮಗಳನ್ನು ಕೈಗೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ತಮಿಳುನಾಡಿನ ಐವರು ಮತ್ತು ಕೇರಳದ ಮೂವರು ಮೀನುಗಾರರನ್ನು ಇಂಡೋನೆಷ್ಯದ ವಾಯು ಮತ್ತು ಸಾಗರ ಪೊಲೀಸರ ತಂಡಗಳು ಬಂಧಿಸಿದ್ದು,ಕಾನೂನು ಕ್ರಮಕ್ಕಾಗಿ ಅವರನ್ನು ದಿಟ್ಪೋಲೈರಡ್ ಪಿಯರ್ ಗೆ ಕರೆದೊಯ್ಯಲಾಗಿದೆ ಎಂದು ಗುರುವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್ ತಿಳಿಸಿದ್ದ್ದಾರೆ. ಈ ಮೀನುಗಾರರು ಫೆ.17ರಂದು ಮೀನುಗಾರಿಕೆಗೆ ತೆರಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತ್ಯೇಕವಾಗಿ 33 ಮೀನುಗಾರರು ಮತ್ತು ಮೂರು ಬೋಟ್ಗಳನ್ನು ಸೇಷೆಲ್ಸ್ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದೂ ಅವು ಹೇಳಿವೆ.

ಮೇ ತಿಂಗಳಿನಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸ್ಟಾಲಿನ್ ಕೇಂದ್ರ ಸರಕಾರಕ್ಕೆ ಇಂತಹ ಹಲವಾರು ಪತ್ರಗಳನ್ನು ಬರೆದಿದ್ದಾರೆ.    ನಮ್ಮ ಮೀನುಗಾರರಿಗೆ ಕಿರುಕುಳ ಮತ್ತು ಅವರ ಬಂಧನದ ಇಂತಹ ಘಟನೆಗಳು ಹೆಚ್ಚುತ್ತಿರುವುದನ್ನು ಬೆಟ್ಟು ಮಾಡಿ ತಮಿಳುನಾಡು ಸರಕಾರವು ಹಲವಾರು ಪತ್ರಗಳನ್ನು ಬರೆದಿದ್ದರೂ ಇಂತಹ ಘಟನೆಗಳು ಮುಂದುವರಿದಿವೆ ಎಂದು ಸ್ಟಾಲಿನ್ ಫೆ.28ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ಶ್ರೀಲಂಕಾ ನೌಕಾಪಡೆಯು ಬಂಧಿಸಿರುವ ತಮಿಳುನಾಡಿನ ಮೂರು ಮೀನುಗಾರಿಕೆ ದೋಣಿಗಳು ಮತ್ತು 47ಮೀನುಗಾರರ ಬಿಡುಗಡೆಗಾಗಿ ಶ್ರೀಲಂಕಾ ಸರಕಾರಕ್ಕೆ ಮನವಿ ಮಾಡಿಕೊಳ್ಳುವಂತೆ ಅವರು ಫೆ.23ರಂದು ಜೈಶಂಕರ್ರನ್ನು ಆಗ್ರಹಿಸಿದ್ದರು. ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿತ್ತು. ದ್ವಿಪಕ್ಷೀಯ ಮಾತುಕತೆಗಳನ್ನು ಆರಂಭಿಸುವಂತೆ ಮತ್ತು ಜಟಿಲ ಸಮಸ್ಯೆಗೆ ಶಾ ಶ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಅವರು ಕೋರಿಕೊಂಡಿದ್ದರು.

ಪಾಕ್ ಜಲಸಂಧಿಯಲ್ಲಿ ತಮಿಳುನಾಡು ಮೀನುಗಾರರ ಐತಿಹಾಸಿಕ ಹಕ್ಕುಗಳಿಗೆ ಅಡ್ಡಿಯನ್ನುಂಟು ಮಾಡುವ ಶ್ರೀಲಂಕಾ ನೌಕಾಪಡೆಯ ಪ್ರಯತ್ನಗಳನ್ನು ಕೊನೆಗೊಳಿಸಲು ಸಂಘಟಿತ ಪ್ರಯತ್ನಗಳನ್ನು ಮಾಡುವಂತೆಯೂ ಸ್ಟಾಲಿನ್ ಕೇಂದ್ರವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News