ಉಕ್ರೇನ್ ನ ಪ್ರಯೋಗಾಲಯದಲ್ಲಿನ ಸೂಕ್ಷ್ಮಜೀವಿಗಳ ನಾಶಕ್ಕೆ ಸಲಹೆ ನೀಡಿದ್ದೆ: ವಿಶ್ವ ಆರೋಗ್ಯ ಸಂಸ್ಥೆ

Update: 2022-03-11 18:01 GMT

ಜಿನೆವಾ, ಮಾ.11: ದೇಶದಲ್ಲಿನ ಆರೋಗ್ಯ ಸಂಸ್ಥೆಗಳ ಪ್ರಯೋಗಾಲಯದಲ್ಲಿರುವ ಅತ್ಯಂತ ಅಪಾಯಕಾರಿ ಸೂಕ್ಷ್ಮಜೀವಿಗಳನ್ನು ನಾಶಗೊಳಿಸುವಂತೆ ಈ ಹಿಂದೆಯೇ ಸಲಹೆ ನೀಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಲವು ವರ್ಷಗಳಿಂದ ಉಕ್ರೇನ್ನ ಆರೋಗ್ಯಕ್ಷೇತ್ರದ ಪ್ರಯೋಗಾಲಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅಪಾಯಕಾರಿ ಸೂಕ್ಷ್ಮಜೀವಿಗಳ ಸಂಭಾವ್ಯ ಸೋರಿಕೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸಲಾಗಿದೆ. ಪ್ರಯೋಗಾಲಯದಿಂದ ಸೂಕ್ಷ್ಮಜೀವಿಗಳ ಸಂಭಾವ್ಯ ಸೋರಿಕೆ ಜನಸಮುದಾಯದಲ್ಲಿ ರೋಗ ಹರಡಲು ಕಾರಣವಾಗಬಹುದು ಎಂದು ಉಕ್ರೇನ್ಗೆ ಸಲಹೆ ನೀಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ರಶ್ಯದ ಬಾಂಬ್ ದಾಳಿಯಿಂದ ಉಕ್ರೇನ್ನ ಪ್ರಯೋಗಾಲಯದಲ್ಲಿರುವ ಅಪಾಯಕಾರಿ ಸೂಕ್ಷ್ಮಜೀವಿಗಳು ಸೋರಿಕೆಯಾಗಿ, ಕೋವಿಡ್-19 ರೀತಿಯ ಮಾರಕ ಸಾಂಕ್ರಾಮಿಕ ರೋಗ ಹರಡುವ ಅಪಾಯದ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಈ ಮಧ್ಯೆ, ಅಮೆರಿಕವು ಉಕ್ರೇನ್ನಲ್ಲಿ ಜೈವಿಕ ಅಸ್ತ್ರಗಳ ಪ್ರಯೋಗಾಲಯಕ್ಕೆ ನೆರವು ಒದಗಿಸುತ್ತಿದೆ ಎಂಬ ರಶ್ಯದ ಆರೋಪವನ್ನು ಅಮೆರಿಕ ಮತ್ತು ಉಕ್ರೇನ್ ತಳ್ಳಿಹಾಕಿದೆ. ರಶ್ಯವು ತನ್ನ ಮಾರಕ ಜೈವಿಕ ಅಸ್ತ್ರವನ್ನು ಉಕ್ರೇನ್ ಮೇಲೆ ಪ್ರಯೋಗಿಸುವ ಸಂಚಿನ ಒಂದು ಭಾಗವಾಗಿ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದೆ ಎಂದು ಶ್ವೇತಭವನದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಉಕ್ರೇನ್ನಲ್ಲಿ ಜೈವಿಕ ಅಸ್ತ್ರದ ಕುರಿತ ರಶ್ಯದ ಆರೋಪದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆ ಶುಕ್ರವಾರ ನಡೆಯಲಿದೆ ಎಂದು ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News