ಉತ್ತರ ಪ್ರದೇಶ: ಶೇಕಡ 97ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಠೇವಣಿ ನಷ್ಟ!
ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 399 ಅಭ್ಯರ್ಥಿಗಳ ಪೈಕಿ 387 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಶೇಕಡ 97ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಂತಾಗಿದೆ. ಬಹುತೇಕ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷ ಕೇವಲ ಶೇಕಡ 2.4ರಷ್ಟು ಮತಗಳನ್ನು ಗಳಿಸಿದ್ದು, ಇದು ಕೇವಲ 33 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್ ಎಲ್‍ಡಿ ಗಳಿಸಿದ್ದ ಮತ (2.9%)ಕ್ಕಿಂತ ಕಡಿಮೆ ಎಂದು timesofindia ವರದಿ ಮಾಡಿದೆ.
ಪ್ರಮುಖ ಪಕ್ಷಗಳ ಪೈಕಿ ಬಿಎಸ್ಪಿಯ 290 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಪಕ್ಷ ಎಲ್ಲ 403 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ರಾಜ್ಯದಲ್ಲಿ ವಿಜಯಿಯಾಗಿ ಹೊರಹೊಮ್ಮಿದ ಬಿಜೆಪಿಯ ಮೂವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿ 376 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. 347 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷದ ಆರು ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿದೆ.
ಕುತೂಹಲದ ಅಂಶವೆಂದರೆ ಬಿಜೆಪಿ ಮೈತ್ರಿಕೂಟದ ಸಣ್ಣ ಪಕ್ಷವಾದ ಅಪ್ನಾ ದಳ (ಸೋನೆವಾಲ್) ಮತ್ತು ನಿಷದ್ 27 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಈ ಪೈಕಿ ಯಾರೂ ಠೇವಣಿ ಕಳೆದುಕೊಂಡಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಎಸ್ಪಿ ಕೂಟದ ಮಿತ್ರಪಕ್ಷವಾದ ಎಸ್‍ಬಿಎಸ್ಪಿ ಮತ್ತು ಅಪ್ನಾದಳ (ಕಮೇರವಾಡಿ) ಪಕ್ಷಗಳ 25 ಅಭ್ಯರ್ಥಿಗಳ ಪೈಕಿ 8 ಮಂದಿಗೆ ಠೇವಣಿ ನಷ್ಟವಾಗಿದೆ. 33 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್ ಎಲ್‍ಡಿಗೆ ಮೂರು ಕ್ಷೇತ್ರಗಳಲ್ಲಿ ಠೇವಣಿ ನಷ್ಟವಾಗಿದೆ.
ಚಲಾಯಿತ ಸಿಂಧು ಮತಗಳಲ್ಲಿ ಕನಿಷ್ಠ ಆರನೇ ಒಂದು ಮತಗಳನ್ನು ಪಡೆಯದ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ. ಉತ್ತರ ಪ್ರದೇಶ ವಿಧಾನಸಭೆಗೆ ಸ್ಪರ್ಧಿಸಿದ್ದ 4442 ಅಭ್ಯರ್ಥಿಗಳ ಪೈಕಿ 3522 ಮಂದಿ ಅಥವಾ ಶೇಕಡ 80ರಷ್ಟು ಮಂದಿ ಠೇವಣಿ ಕಳೆದುಕೊಂಡಿದ್ದಾರೆ.