14 ವರ್ಷಗಳಲ್ಲೇ ಅಮೆರಿಕಾದಲ್ಲಿ ಗಗನಕ್ಕೇರಿದ ಪೆಟ್ರೋಲ್‌ ದರ, ಆದರೂ ಭಾರತಕ್ಕಿಂತ ಕಡಿಮೆಯೇ !

Update: 2022-03-12 06:57 GMT

ನ್ಯೂಯಾರ್ಕ್: ಯುಎಸ್‌ ನಲ್ಲಿ ಇಂಧನ ಬೆಲೆಗಳು ದಾಖಲೆಯ ಮಟ್ಟದಲ್ಲಿ ಗಗನಕ್ಕೇರಿದೆ. ಆದರೆ ಭಾರತದಲ್ಲಿನ ದರಗಳಿಗೆ ಹೋಲಿಸಿದರೆ ಅವು ಇನ್ನೂ ಗಣನೀಯವಾಗಿ ಕಡಿಮೆಯೇ ಇದೆ ಎಂದು indiatoday.in ವರದಿ ಮಾಡಿದೆ. ಮಾರ್ಚ್ 10 ರಂದು ಒಂದು ಗ್ಯಾಲನ್ ಗ್ಯಾಸೋಲಿನ್ (ಪೆಟ್ರೋಲ್) ಸರಾಸರಿ ಬೆಲೆ $4.31 (ಅಂದಾಜು ರೂ. 329) ಆಗಿತ್ತು. ವಾರದಲ್ಲಿ ಗ್ಯಾಸೋಲಿನ್ ಬೆಲೆಗಳು 14 ವರ್ಷಗಳಲ್ಲಿ ಅತ್ಯಧಿಕ ಮಟ್ಟಕ್ಕೆ ಏರಿದೆ ಮತ್ತು 17 ಜುಲೈ 2008 ರಂದು ತಲುಪಿದ್ದ $4.11 ರ ಹಿಂದಿನ ದಾಖಲೆಯನ್ನು ದಾಟಿದೆ. ಪ್ರತಿ ಗ್ಯಾಲನ್‌ಗೆ ಸರಾಸರಿ $5.05 ದರದಲ್ಲಿ ಡೀಸೆಲ್ ಇನ್ನಷ್ಟು ದುಬಾರಿಯಾಗಿದೆ.

ಯುಎಸ್‌ನಲ್ಲಿ ಇಂಧನವನ್ನು ಗ್ಯಾಲನ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ ಭಾರತದಂತೆ ಲೀಟರ್‌ಗಳಲ್ಲಿ ಅಲ್ಲ. ಒಂದು US ಗ್ಯಾಲನ್ 3.78 ಲೀಟರ್‌ಗೆ ಸಮನಾಗಿರುತ್ತದೆ, ಆದರೆ UK ಗ್ಯಾಲನ್ ಅನ್ನು ಇಂಪೀರಿಯಲ್ ಗ್ಯಾಲನ್ ಎಂದೂ ಕರೆಯುತ್ತಾರೆ, ಇದು 4.54 ಲೀಟರ್ ಪ್ರಮಾಣವನ್ನು ಅಳೆಯುತ್ತದೆ. ಹಾಗಾಗಿ, ಯುಎಸ್‌ ನಲ್ಲಿ ಒಂದು ಲೀಟರ್ ಪೆಟ್ರೋಲ್, US ಗ್ಯಾಲನ್ ಅನ್ನು ಲೀಟರ್‌ಗೆ ಮತ್ತು ಡಾಲರ್‌ಗಳನ್ನು ರೂಪಾಯಿಗೆ ಪರಿವರ್ತಿಸಿದಾಗ, 86.97 ರೂ. ಆಗುತ್ತದೆ. ಇದು ಭಾರತದಲ್ಲಿ ಕೆಲ ತಿಂಗಳಿನಿಂದ ಪೆಟ್ರೋಲ್ ಮಾರಾಟವಾಗುವ ಬೆಲೆಗಿಂತ ಅಗ್ಗವಾಗಿದೆ ಎಂದು ವರದಿ ತಿಳಿಸಿದೆ.

ಹೆಚ್ಚಿನ ಭಾರತೀಯ ನಗರಗಳಲ್ಲಿ ಪೆಟ್ರೋಲ್ ಬೆಲೆಗಳು ರೂ 90 ಅಥವಾ ರೂ 100 ಕ್ಕಿಂತ ಹೆಚ್ಚಿವೆ. ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ರೂ 109.98 ಆಗಿದ್ದರೆ, ದಿಲ್ಲಿಯಲ್ಲಿ 95.41 ರೂ; ಚೆನ್ನೈನಲ್ಲಿ 101.40 ರೂ. ಮತ್ತು ಕೋಲ್ಕತ್ತಾದಲ್ಲಿ 104.67 ರೂ. ನವೆಂಬರ್ 4, 2021 ರಿಂದ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿ ಕಡಿತಗೊಳಿಸಿದ ನಂತರ ಬೆಲೆಗಳು ಸದ್ಯ ಸ್ಥಿರವಾಗಿವೆ. ಹೆಚ್ಚಿನ ರಾಜ್ಯ ಸರ್ಕಾರಗಳು ಸ್ಥಳೀಯ ಮಾರಾಟ ತೆರಿಗೆಯನ್ನೂ ಕಡಿತಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News