ನಮ್ಮ ಮೇಯರ್‌ರನ್ನು ಅಪಹರಣ ಮಾಡಿದ ರಶ್ಯಾ ಐಸಿಸ್ ಭಯೋತ್ಪಾದಕರಂತೆ ವರ್ತಿಸುತ್ತಿದೆ: ಉಕ್ರೇನ್
ಕೈವ್: ದಕ್ಷಿಣ ಉಕ್ರೇನ್‌ನ ಮೆಲಿಟೊಪೋಲ್‌ನ ಮೇಯರ್ ಅವರನ್ನು ರಷ್ಯಾದ ಸೈನಿಕರು ಶುಕ್ರವಾರ ಅಪಹರಿಸಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. "10 ಮಂದಿ ಆಕ್ರಮಣಕಾರರ ಗುಂಪು ಮೆಲಿಟೊಪೋಲ್ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ" ಎಂದು ಉಕ್ರೇನ್ ಸಂಸತ್ತು ಟ್ವಿಟರ್‌ನಲ್ಲಿ ತಿಳಿಸಿದೆ.
ಶುಕ್ರವಾರ ತಡವಾಗಿ ಹಂಚಿಕೊಂಡ ವೀಡಿಯೊ ಸಂದೇಶವೊಂದರಲ್ಲಿ, ಝೆಲೆನ್ಸ್ಕಿ ಅಪಹರಣವನ್ನು ದೃಢಪಡಿಸಿದ್ದು, ಫೆಡೋರೊವ್ ಅವರನ್ನು "ಉಕ್ರೇನ್ ಮತ್ತು ಅವರ ಸಮುದಾಯದ ಸದಸ್ಯರನ್ನು ಧೈರ್ಯದಿಂದ ರಕ್ಷಿಸುವ ಮೇಯರ್" ಎಂದು ಬಣ್ಣಿಸಿದ್ದಾರೆ.
"ಇದು ನಿಸ್ಸಂಶಯವಾಗಿ ಆಕ್ರಮಣಕಾರರ ದೌರ್ಬಲ್ಯದ ಸಂಕೇತವಾಗಿದೆ. ಅವರು ಕಾನೂನುಬದ್ಧವಾಗಿರುವ ಸ್ಥಳೀಯ ಉಕ್ರೇನಿಯನ್ ಅಧಿಕಾರಿಗಳ ಪ್ರತಿನಿಧಿಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುವ ಐಸಿಸ್ ರೀತಿಯ ಭಯೋತ್ಪಾದನೆಯ ಹೊಸ ಹಂತಕ್ಕೆ ತೆರಳಿದ್ದಾರೆ" ಎಂದು ಅವರು ಹೇಳಿದರು.
ಉಕ್ರೇನ್‌ನ ಅಧ್ಯಕ್ಷೀಯ ಆಡಳಿತದ ಉಪ ಮುಖ್ಯಸ್ಥ ಕಿರಿಲ್ಲೊ ಟಿಮೊಶೆಂಕೊ ಅವರು ಟೆಲಿಗ್ರಾಮ್‌ನಲ್ಲಿ, ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯನ್ನು ಹಿಡಿದುಕೊಂಡು ಸೈನಿಕರು ಕಟ್ಟಡದಿಂದ ಹೊರಬರುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.