80ಕ್ಕೂ ಹೆಚ್ಚು ನಾಗರಿಕರು ಅಡಗಿಕೊಂಡಿದ್ದ ಮಸೀದಿಯ ಮೇಲೆ ರಶ್ಯಾ ದಾಳಿ: ಉಕ್ರೇನ್
ಕೀವ್: ಬಿಕ್ಕಟ್ಟು ಗಂಭೀರವಾಗುತ್ತಿದ್ದಂತೆಯೇ ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್‌ಗೆ ಸಮೀಪಿಸುತ್ತಿವೆ ಮತ್ತು ಹಲವಾರು ಇತರ ನಗರಗಳಲ್ಲಿನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಈ ನಡುವೆ ಬಂದರು ನಗರವಾದ ಮರಿಯುಪೋಲ್‌ನಲ್ಲಿ 80 ನಾಗರಿಕರು ವಾಸಿಸುತ್ತಿದ್ದ ಮಸೀದಿಯ ಮೇಲೆ ರಷ್ಯಾ ದಾಳಿ ಮಾಡಿದೆ ಎಂದು ಉಕ್ರೇನ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಉಕ್ರೇನ್‌ನ ವಿದೇಶಾಂಗ ಸಚಿವಾಲಯವು, ಮಾರಿಯುಪೋಲ್‌ನಲ್ಲಿರುವ ಮಸೀದಿಯೊಂದಕ್ಕೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿದ್ದು, ಅಲ್ಲಿ 80 ನಾಗರಿಕರು ಆಶ್ರಯ ಪಡೆದಿದ್ದರು ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಮಾರಿಯುಪೋಲ್‌ನಲ್ಲಿರುವ ಸುಲ್ತಾನ್ ಸುಲೈಮಾನ್ ರ ಹರಮ್ ಸುಲ್ತಾನ್ ಮಸೀದಿಯ ಮೇಲೆ ರಶ್ಯಾ ಆಕ್ರಮಣಕಾರರು ಶೆಲ್ ದಾಳಿ ನಡೆಸಿದ್ದಾರೆ. ಅಲ್ಲಿ ಉಕ್ರೇನ್ ನಾಗರಿಕರು ಹಾಗೂ ಟರ್ಕಿಯ ಹಲವು ನಾಗರಿಕರು ಆಶ್ರಯ ಪಡೆದಿದ್ದರು. ಇದರಲ್ಲಿ ಮಕ್ಕಳು ಮತ್ತು ವಯಸ್ಕರೂ ಸೇರಿದ್ದರು ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.