ಉಕ್ರೇನ್‌ನಿಂದ ಮರಳಿದವರಿಗೆ ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಹೈಕೋರ್ಟ್‌ಗೆ ಮೊರೆ

Update: 2022-03-12 15:00 GMT
photo courtesy:twitter

ಹೊಸದಿಲ್ಲಿ,ಮಾ.12: ಉಕ್ರೇನ್‌ನಿಂದ ವಾಪಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ಕ್ಕೆ ನಿರ್ದೇಶ ನೀಡುವಂತೆ ಕೋರಿ ಎನ್‌ಜಿಒ ಪ್ರವಾಸಿ ಲೀಗಲ್ ಸೆಲ್ (ಪಿಎಲ್‌ಸಿ) ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದೆ. 

ಉಕ್ರೇನ್‌ನಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳು ಯುದ್ಧದಿಂದಾಗಿ ತಮ್ಮ ಅಧ್ಯಯನಕ್ಕೆ ಅಡ್ಡಿಯುಂಟಾಗಿರುವ ಹಂತದಿಂದ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರತಿವಾದಿಗಳಿಗೆ ನಿರ್ದೇಶ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ವೈದ್ಯಕೀಯ ಶಿಕ್ಷಣಾಕಾಂಕ್ಷಿಗಳಾಗಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಅಗ್ಗದ ಶುಲ್ಕಗಳು,ಗುಣಮಟ್ಟದ ಶಿಕ್ಷಣ ಮತ್ತು ವಿದೇಶಗಳಲ್ಲಿ ವೈದ್ಯವೃತ್ತಿಯನ್ನು ನಡೆಸಲು ಪರವಾನಿಗೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆಆದ್ಯತೆ ನೀಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ನೀಟ್‌ನಲ್ಲಿ ತೇರ್ಗಡೆಯಾಗಿದ್ದರೆ ಉಕ್ರೇನ್‌ನಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಸೇರಲು ಯಾವುದೇ ಪ್ರವೇಶ ಪರೀಕ್ಷೆಯನ್ನು ಬರೆಯುವ ಅಗತ್ಯವೂ ಇಲ್ಲ. ಈ ಎಲ್ಲ ಅಂಶಗಳು ಭಾರತೀಯರಿಗೆ ವ್ಯೆದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್ ಅನ್ನು ಆದ್ಯತೆಯ ಆಯ್ಕೆಯನ್ನಾಗಿ ಮಾಡಿವೆ ಎಂದು ಪಿಎಲ್ಸಿ ಅರ್ಜಿಯಲ್ಲಿ ತಿಳಿಸಿದೆ.

ಯುದ್ಧಗ್ರಸ್ತ ಉಕ್ರೇನ್‌ನಿಂದ ರಕ್ಷಿಸಲ್ಪಟ್ಟಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಈಗಾಗಲೇ ಯುದ್ಧವಲಯದಲ್ಲಿದ್ದು ಯಾತನೆಗಳನ್ನು ಅನುಭವಿಸಿದ್ದಾರೆ ಮತ್ತು ಅವರ ಬವಣೆಯು ಅವರ ವೃತ್ತಿಜೀವನಕ್ಕೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯಿದೆ. ವಿದೇಶದಲ್ಲಿ ವ್ಯಾಸಂಗ ನಡೆಸುತ್ತಿದ್ದು,ಅನಿವಾರ್ಯವಾಗಿ ಶೈಕ್ಷಣಿಕ ಅವಧಿಯ ನಡುವೆಯೇ ಭಾರತಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾವಕಾಶವನ್ನು ಕಲ್ಪಿಸುವ ಯಾವುದೇ ನಿಯಮಗಳಾಗಲೀ ನಿಬಂಧನೆಗಳಾಗಲೀ ಸದ್ಯಕ್ಕೆ ಭಾರತದಲ್ಲಿಲ್ಲ. 

ಭಾರತೀಯ ಸಂವಿಧಾನವು ವಿಧಿ 21ರಡಿ ಬದುಕುವ ಮೂಲಭೂತ ಹಕ್ಕನ್ನು ಖಾತರಿ ಪಡಿಸುತ್ತದೆ ಮತ್ತು ಇದು ಪ್ರಸಕ್ತ ಪರಿಸ್ಥಿತಿಯಿಂದಾಗಿ ವಿದೇಶಗಳಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಅನಿವಾರ್ಯವಾಗಿ ಮಧ್ಯದಲ್ಲಿಯೇ ತೊರೆದು ಭಾರತಕ್ಕೆ ಮರಳಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಭಾರತದಲ್ಲಿ ಮುಂದುವರಿಸಲು ಹಕ್ಕನ್ನು ಒಳಗೊಂಡಿರಬೇಕು ಎಂದು ಅರ್ಜಿಯು ಪ್ರತಿಪಾದಿಸಿದೆ.

ಈ ಮೊದಲು ಈ ವಿದ್ಯಾರ್ಥಿಗಳಿಗೆ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾವಕಾಶವನ್ನು ಕಲ್ಪಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವೂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News