ನೇಪಾಳದ ಪ್ರದೇಶವನ್ನು ಅತಿಕ್ರಮಿಸಿದ ಚೀನಾ: ವರದಿ

Update: 2022-03-12 17:04 GMT
photo pti

ಕಠ್ಮಂಡು, ಮಾ.12: ಚೀನಾವು ನೇಪಾಳದ ಪ್ರದೇಶವನ್ನು ಅತಿಕ್ರಮಿಸಿದೆ ಎಂದು ನೇಪಾಳ ಸರಕಾರದ 2021ರ ಸೆಪ್ಟಂಬರ್ ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
 
ನೇಪಾಳದ ಪಶ್ಚಿಮದಲ್ಲಿನ ಹುಮ್ಲಾ ಜಿಲ್ಲೆಗೆ ಅಕ್ರಮ ಪ್ರವೇಶ ಮಾಡಿದ ಚೀನಾದ ಸೇನೆ ನೇಪಾಳದ ಗಡಿಠಾಣೆಯ ಪೊಲೀಸರನ್ನು ಬೆದರಿಸಿದೆ. ಉಭಯ ದೇಶಗಳ ನಡುವಿನ ಗಡಿರೇಖೆಯ ಬಳಿ ನೇಪಾಳಕ್ಕೆ ಸೇರಿದ ಲಲುನ್ಜಾಂಗ್ ನಗರದಲ್ಲಿ ನಡೆಯುತ್ತಿದ್ದ ಧಾರ್ಮಿಕ ಚಟುವಟಿಕೆಗಳನ್ನು ಚೀನಾ ಪಡೆ ನಿರ್ಬಂಧಿಸಿದೆ. ಅಲ್ಲದೆ ಈ ಪ್ರದೇಶದಲ್ಲಿನ ರೈತರು ತಮ್ಮ ಜಾನುವಾರುಗಳಿಗೆ ಮೇವು ಉಣಿಸಲೂ ಚೀನೀ ಪಡೆ ಅಡ್ಡಿಪಡಿಸುತ್ತಿದೆ ಎಂದು ವರದಿ ಹೇಳಿದೆ.
 
ಅಲ್ಲದೆ ಗಡಿಭಾಗದಲ್ಲಿ ತಂತಿ ಬೇಲಿ ನಿರ್ಮಿಸುತ್ತಿರುವುದೂ ಬೆಳಕಿಗೆ ಬಂದಿದೆ. ಗಡಿರೇಖೆಯಲ್ಲಿ ನೇಪಾಳಕ್ಕೆ ಸೇರಿದ ಪ್ರದೇಶದಲ್ಲಿ ಚೀನಾ ಸೇನೆಯಿಂದ ಕಾಲುವೆ ಮತ್ತು ರಸ್ತೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಈ ಪ್ರದೇಶದಲ್ಲಿ ನೇಪಾಳವು ಹೆಚ್ಚುವರಿ ಯೋಧರನ್ನು ನಿಯೋಜಿಸುವ ಅಗತ್ಯವಿದೆ ಎಂದು ವರದಿ ಶಿಫಾರಸು ಮಾಡಿದೆ. ಈ ವರದಿಯನ್ನು ರಹಸ್ಯವಾಗಿರಿಸಿದ ಸರಕಾರ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಗೋಜಿಗೂ ಹೋಗಿಲ್ಲ. ಆದರೆ ವಿದೇಶ ವ್ಯವಹಾರ ಇಲಾಖೆಯ ಬಳಿ ಬಾಕಿಯಿರುವ ಈ ವರದಿ ಇದೀಗ ಸೋರಿಕೆಯಾಗಿರುವುದು ಸರಕಾರಕ್ಕೆ ತೀವ್ರ ಮುಜುಗುರಕ್ಕೆ ಕಾರಣವಾಗಿದೆ.

ವರದಿ ಸೋರಿಕೆಯಾದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ನೇಪಾಳದ ಮಾಹಿತಿ ಸಚಿವ ಗ್ಯಾನೇಂದ್ರ ಬಹದುರ್ ಕರ್ಕಿ, ನೆರೆದೇಶಗಳೊಂದಿಗಿನ ಯಾವುದೇ ಗಡಿ ವಿವಾದವನ್ನೂ ರಾಜತಾಂತ್ರಿಕ ರೀತಿಯಲ್ಲಿ ಇತ್ಯರ್ಥಪಡಿಸಲಾಗುವುದು. ಭಾರತ ಅಥವಾ ಚೀನಾದೊಂದಿಗೆ ನಮಗೆ ಗಡಿಗೆ ಸಂಬಂಧಿಸಿ ಯಾವುದೇ ಸಮಸ್ಯೆಯಿದ್ದರೂ ಅದನ್ನು ಮಾತುಕತೆಯ ಮೂಲಕ ಪರಿಹರಿಸಲಾಗುವುದು. ಸಮಸ್ಯೆ ಬಿಗಡಾಯಿಸದಂತೆ ಮತ್ತು ಇಂತಹ ಪರಿಸ್ಥಿತಿ ಬಾರದಂತೆ ನೇಪಾಳ ಸರಕಾರ ಯಾವತ್ತೂ ಪ್ರಯತ್ನಿಸುತ್ತದೆ ಎಂದಿದ್ದಾರೆ.
 
ವರದಿಯಲ್ಲಿ ಉಲ್ಲೇಖಿಸಿದ ಬಿಕ್ಕಟ್ಟಿನ ಬಗ್ಗೆ ನೇಪಾಳ ಸರಕಾರ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ, ನೇಪಾಳದ ರಾಷ್ಟ್ರೀಯ ಏಕತಾ ಅಭಿಯಾನದ ಅಧ್ಯಕ್ಷ ಬಿನಯ್ ಯಾದವ್, ಚೀನಾದ ಭೂಕಬಳಿಕೆ ತಂತ್ರದ ಬಗ್ಗೆ ಗಮನ ವಹಿಸುವಂತೆ ಕಠ್ಮಂಡುವಿನ ವಿಶ್ವಸಂಸ್ಥೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಅತಿಕ್ರಮಣವನ್ನು ವಿರೋಧಿಸಿ ನೇಪಾಳದಲ್ಲಿ ವ್ಯಾಪಕ ಪ್ರತಿಭಟನೆಯೂ ನಡೆದಿದೆ. ಆದರೆ ವರದಿಯನ್ನು ತಳ್ಳಿಹಾಕಿರುವ ಚೀನಾ, ಈ ರೀತಿ ತಪ್ಪು ಹಾದಿಗೆ ಎಳೆಯುವ ವರದಿಗಳ ಬಗ್ಗೆ ನೇಪಾಳದ ಜನತೆ ಎಚ್ಚರಿಕೆ ವಹಿಸುತ್ತಾರೆ ಎಂದು ಆಶಿಸುವುದಾಗಿ ಹೇಳಿಚ್ವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News