ಯೆಮನ್: 2 ತಿಂಗಳಲ್ಲಿ ಕನಿಷ್ಟ 47 ಮಕ್ಕಳ ಮೃತ್ಯು; ಯುನಿಸೆಫ್ ವರದಿ

Update: 2022-03-12 18:20 GMT
photo pti

ವಿಶ್ವಸಂಸ್ಥೆ, ಮಾ.12: ತೀವ್ರ ಅಂತರ್ಯುದ್ಧ ನಡೆಯುತ್ತಿರುವ ಯೆಮನ್ನಲ್ಲಿ ಕಳೆದ 2 ತಿಂಗಳಲ್ಲಿ ಕನಿಷ್ಟ 47 ಮಕ್ಕಳ ಹತ್ಯೆ ಅಥವಾ ಅಂಗ ಊನಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಶನಿವಾರ ಹೇಳಿದೆ.


2015ರಿಂದ ಯೆಮನ್‌ನಲ್ಲಿ ಕನಿಷ್ಟ 10,000 ಅಪ್ರಾಪ್ತ ವಯಸ್ಕರು ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ದಾಳಿಯ ಮೊದಲ ಗುರಿ ಮಕ್ಕಳು ಅಥವಾ ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ಯುನಿಸೆಫ್ ಹೇಳಿದೆ.

ಯೆಮನ್‌ನ ಹೌದಿ ಬಂಡುಗೋರರು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ಅಂತರ್ಯುದ್ಧ ಭುಗಿಲೆದ್ದಿದೆ. ಸರಕಾರಿ ಪಡೆಗಳಿಗೆ ಸೌದಿ ಅರೆಬಿಯಾ ನೇತೃತ್ವದ ಮಿತ್ರರಾಷ್ಟ್ರಗಳು ನಿಂತಿವೆ. ಯೆಮನ್‌ನ ಹಲವೆಡೆ ನಡೆದ ಸಂಘರ್ಷಧ ಕಾರಣ ಈ ವರ್ಷದ ಆರಂಭದ 2 ತಿಂಗಳಲ್ಲೇ ಕನಿಷ್ಟ 47 ಮಕ್ಕಳ ಹತ್ಯೆಯಾಗಿದೆ ಅಥವಾ ಅಂಗ ಊನಗೊಳಿಸಲಾಗಿದೆ. 

ಸುಮಾರು 7 ವರ್ಷದಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಟ 10,200 ಮಕ್ಕಳು ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಯೆಮನ್‌ನಲ್ಲಿ ಹಿಂಸಾಚಾರ, ಯಾತನೆ ಮತ್ತು ದುಃಖ ಸಾಮಾನ್ಯವಾಗಿದೆ ಮತ್ತು ಹಲವಾರು ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ಈ ಸಂಘರ್ಷಕ್ಕೆ ಶೀಘ್ರ ರಾಜಕೀಯ ಪರಿಹಾರ ಹುಡುಕಿ ಅಲ್ಲಿನ ಜನತೆ ಶಾಂತರೀತಿಯ ಬದುಕು ಸಾಗಿಸಲು ಇದು ಸಕಾಲವಾಗಿದೆ ಎಂದು ಯುನಿಸೆಫ್ ಯೆಮನ್ ಪ್ರತಿನಿಧಿ ಫಿಲಿಪ್ ಡ್ಯುಮೆಲೆ ಹೇಳಿದ್ದಾರೆ. ಯೆಮನ್‌ನ ಸಂಘರ್ಷದ ಪರಿಣಾಮ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಲವು ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಯುನಿಸೆಫ್ ಹೇಳಿದೆ.

ರಶ್ಯವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ 2 ವಾರದಲ್ಲಿ ಕನಿಷ್ಟ 71 ಮಕ್ಕಳು ಮೃತಪಟ್ಟು 100ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News