ಅಮೆರಿಕದ 12 ಸಾವಿರ ಯೋಧರು ರಶ್ಯದ ಗಡಿಯ ಸನಿಹದಲ್ಲಿದ್ದಾರೆ, ಪುಟಿನ್‌ ಖಂಡಿತ ಗೆಲ್ಲುವುದಿಲ್ಲ: ಬೈಡನ್

Update: 2022-03-12 18:18 GMT
photo pti

ವಾಷಿಂಗ್ಟನ್, ಮಾ.12: ರಶ್ಯದ ಗಡಿಭಾಗದಲ್ಲಿರುವ ಲಾಥ್ವಿಯ, ಎಸ್ಟೋನಿಯಾ, ಲಿಥ್ವೇನಿಯಾ, ರೊಮೇನಿಯಾ ಮುಂತಾದ ದೇಶಗಳಿಗೆ ಅಮೆರಿಕದ 12,000 ಯೋಧರನ್ನು ರವಾನಿಸಲಾಗಿದ್ದು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಖಂಡಿತಾ ಗೆಲ್ಲುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

‌ಶುಕ್ರವಾರ ಡೆಮೊಕ್ರಟಿಕ್ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ 3ನೇ ವಿಶ್ವಯುದ್ಧ ನಡೆಯುವುದು ನಮಗೆ ಇಷ್ಟವಿಲ್ಲ. ಆದರೆ ನೇಟೊ ಪ್ರದೇಶದ ಪ್ರತಿಯೊಂದು ಇಂಚು ಭೂಮಿಯನ್ನೂ ನಾವು ರಕ್ಷಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.ಆದ್ದರಿಂದಲೇ ರಶ್ಯದ ಗಡಿ ಸನಿಹಕ್ಕೆ ನಮ್ಮ 12 ಸಾವಿರ ಯೋಧರನ್ನು ರವಾನಿಸಿದ್ದೇವೆ. ಆದರೆ ನಾವು ಪ್ರತಿಕ್ರಿಯೆ ನೀಡಿದರೆ ಉಕ್ರೇನ್‌ನಲ್ಲಿ 3ನೇ ವಿಶ್ವಯುದ್ಧ ನಡೆಯುತ್ತದೆ. ಅದು ನಮಗೆ ಇಷ್ಟವಿಲ್ಲ. ಆದರೆ ನೇಟೊದ ಪ್ರದೇಶವನ್ನು ರಕ್ಷಿಸಿಕೊಳ್ಳುವ ಪವಿತ್ರ ಹೊಣೆಗಾರಿಕೆಗೆ ನಾವು ಬದ್ಧರಾಗಿದ್ದೇವೆ. ರಶ್ಯದ ಆಕ್ರಮಣವನ್ನು ದಿಟ್ಟತನದಿಂದ ಎದುರಿಸಿದ ಉಕ್ರೇನ್ ಜನತೆಯ ಶೌರ್ಯ ಶ್ಲಾಘನೀಯವಾಗಿದೆ. ಇವರಿಗೆ ನೇಟೊದ ನೆರವು ಸದಾಕಾಲ ಮುಂದುವರಿಯಲಿದೆ. 3ನೇ ವಿಶ್ವಯುದ್ಧದಲ್ಲಿ ನಮಗೆ ಆಸಕ್ತಿಯಿಲ್ಲ. ಆದರೆ ನಮ್ಮ ಮಿತ್ರರಿಗೆ ಮಿಲಿಟರಿ ಸಾಧನ, ಯುದ್ಧವಿಮಾನ, ಟ್ಯಾಂಕ್, ತರಬೇತಿ ಇತ್ಯಾದಿಗಳು ಮುಂದುವರಿಯಲಿವೆ. ಯುರೋಪಿಯನ್ ಯೂನಿಯನ್, ನೇಟೊ ಹಾಗೂ ಏಶ್ಯಾದ ದೇಶಗಳೊಂದಿಗೆ ಸಮನ್ವಯ ಸಾಧಿಸಿ ಪುಟಿನ್ ವಿರುದ್ಧ ಆರ್ಥಿಕ ಒತ್ತಡ ಹೇರಲು ಮತ್ತು ರಶ್ಯವನ್ನು ಜಾಗತಿಕ ರಂಗದಲ್ಲಿ ಪ್ರತ್ಯೇಕವಾಗಿಸಲು ನಾವು ಶಕ್ತರಾಗಿದ್ದೇವೆ. ಜಿ 7 ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ದೇಶಗಳು ರಶ್ಯಕ್ಕೆ ನೀಡಿರುವ ಅನುಕೂಲಕರ ದೇಶದ ಸ್ಥಾನಮಾನವನ್ನು ರದ್ದುಗೊಳಿಸಲು ನಿರ್ಧರಿಸಿವೆ. ಅಮೆರಿಕ ನೇತೃತ್ವದಲ್ಲಿ ಜಾರಿಯಾಗಿರುವ ನಿರ್ಬಂಧವು ರಶ್ಯದ ಅರ್ಥವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಿದೆ. ರಶ್ಯದ ಕರೆನ್ಸಿ ರೂಬಲ್ ತೀವ್ರ ಅಪಮೌಲ್ಯಗೊಂಡಿದೆ. ಮಾಸ್ಕೊ ಸ್ಟಾಕ್ ಎಕ್ಸ್ಚೇಂಜ್ ಮುಚ್ಚಲ್ಪಟ್ಟಿದೆ. ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದಾಗ ನೇಟೊವನ್ನು ಸುಲಭದಲ್ಲಿ ಒಡೆಯಬಹುದು ಎಂದು ಪುಟಿನ್ ಭಾವಿಸಿದ್ದರು ಎಂದು ಬೈಡನ್ ಹೇಳಿದರು.

ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನೇಟೊ) ಉತ್ತರ ಅಮೆರಿಕ ಮತ್ತು ಯುರೋಪ್ನ 30 ದೇಶಗಳ ಒಕ್ಕೂಟವಾಗಿದೆ. ತನ್ನ ಸದಸ್ಯರ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ರಾಜಕೀಯ ಮತ್ತು ಮಿಲಿಟರಿ ಉಪಕ್ರಮಗಳ ಮೂಲಕ ಖಾತರಿಪಡಿಸುವುದು ಈ ಸಂಘಟನೆಯ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News