ಕೋವಿಡ್ ನಿರ್ಬಂಧ ಇನ್ನಷ್ಟು ಸಡಿಲಿಕೆ ಬಗ್ಗೆ ಶೀಘ್ರ ನಿರ್ಧಾರ: ಆಸ್ಟ್ರೇಲಿಯಾ

Update: 2022-03-12 18:40 GMT

ಸಿಡ್ನಿ, ಮಾ.12: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಸುವ ಬಗ್ಗೆ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.


ಕೋವಿಡ್ ಸೋಂಕು ಒಂದು ರೀತಿಯ ಜ್ವರವಾಗಿದ್ದು ಅದರೊಂದಿಗೇ ಜೀವನ ನಡೆಸುವ ಹಂತಕ್ಕೆ ಮುಂದುವರಿಯಲು ದೇಶದ ರಾಜಕೀಯ ಮುಖಂಡರು ಬಯಸಿದ್ದಾರೆ. ನಮ್ಮ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯಲಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರು ಬರಬಹುದು, ದೇಶಕ್ಕೆ ಮರಳುವ ಜನರಿಗೆ ಕ್ವಾರಂಟೈನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಆದ್ದರಿಂದ ಈಗ ನಾವು ರಾಷ್ಟ್ರೀಯ ಸಾಂಕ್ರಾಮಿಕ ಪ್ರತಿಕ್ರಿಯೆ ಯೋಜನೆಯ ಡಿ ಹಂತದಲ್ಲಿದ್ದೇವೆ ಎಂದು ಸಚಿವ ಸಂಪುಟ ಸಭೆಯ ಬಳಿಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಅವರು ಹೇಳಿದರು.
 
ಕೊರೋನ ಸೋಂಕಿತರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿರಿಸುವ ನಿಯಮದಿಂದ ಕಾರ್ಮಿಕರ ಕೊರತೆ ಎದುರಾಗಿದ್ದು ಇದನ್ನು ರದ್ದುಗೊಳಿಸಬೇಕೆಂದು ರಾಜಕೀಯ ಮುಖಂಡರು ಬಯಸಿದ್ದಾರೆ. ಈ ಬಗ್ಗೆ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ನಾವೀಗ ಬಹುತೇಕ ಡಿ ಹಂತಕ್ಕೆ ತಲುಪಿದ್ದೇವೆ. ಡಿ ಹಂತ ಎಂದರೆ ಸೋಂಕಿನ ಜತೆಗೇ ಜೀವನ ಮುಂದುವರಿಸುವುದಾಗಿದೆ. ಪೂರ್ವದ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಮತ್ತು ಉತ್ತರ ಪ್ರಾಂತದಲ್ಲಿ ಒಂದು ತಿಂಗಳ ಬಳಿಕ ನಿರ್ಬಂಧ ಸಡಿಲಗೊಳ್ಳಲಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಆಸ್ಟ್ರೇಲಿಯಾದ ಅತ್ಯಧಿಕ ಜನಸಂಖ್ಯೆಯ ನಗರ ನ್ಯೂ ಸೌತ್ವೇಲ್ಸ್ನಲ್ಲಿ ಒಮೈಕ್ರಾನ್ನ ನೂತನ ಉಪಪ್ರಭೇಧ ಬಿಎ.2 ಸೋಂಕು ಕಾಣಿಸಿಕೊಂಡಿದ್ದು ಕ್ಷಿಪ್ರ ಗತಿಯಲ್ಲಿ ಹರಡುವ ಮೂಲಕ ಆತಂಕಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News