×
Ad

ಪಂಜಾಬ್: 122 ಮಾಜಿ ಸಚಿವರು, ಶಾಸಕರ ಭದ್ರತೆ ವಾಪಾಸ್

Update: 2022-03-13 07:52 IST
(File Photo)

ಚಂಡೀಗಢ: ಪಂಜಾಬ್‍ನ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳದ ಮಾಜಿ ಸಚಿವರು, ಶಾಸಕರು ಸೇರಿದಂತೆ 122 ರಾಜಕಾರಣಿಗೆ ನೀಡಿದ ಭದ್ರತೆಯನ್ನು ವಾಪಾಸು ಪಡೆದು ಪಂಜಾಬ್ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಆದರೆ ನ್ಯಾಯಾಲಯದ ನಿರ್ದಿಷ್ಟ ಆದೇಶದ ಹಿನ್ನೆಲೆಯಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ಮಾತ್ರ ಹಿಂದಕ್ಕೆ ಪಡೆದಿಲ್ಲ. ಮಾರ್ಚ್ 11ರಂದು  ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಭದ್ರತೆ) ಶರದ್ ಸತ್ಯ ಚೌಹಾಣ್ ಅವರು ಎಲ್ಲ ಪೊಲೀಸ್ ಆಯುಕ್ತರಿಗೆ ಮತ್ತು ಹಿರಿಯ ಅಧೀಕ್ಷಕರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. 

ಅಮರೀಂದರ್ ಸಿಂಗ್ ರಾಜಾ ವಾರ್ರಿಂಗ್, ಮನಪ್ರೀತ್ ಸಿಂಗ್ ಬಾದಲ್, ರಾಜ್ ಕುಮಾರ್ ವೆರ್ಕಾ, ಭರತ್ ಭುಷಣ್ ಆಶು, ಬ್ರಹ್ಮ ಮೊಹಿಂದ್ರಾ, ಸಂಗತ್ ಸಿಂಗ್ ಗಿಲ್ಝಿಯನ್ ಮತ್ತು ಮಾಜಿ ಸ್ಪೀಕರ್ ರಾನಾ ಕೆ.ಪಿ.ಸಿಂಗ್ ಅವರು ಭದ್ರತೆ ಕಳೆದುಕೊಳ್ಳಲಿರುವ ಪ್ರಮುಖರು.

ಗಿದ್ದೆರ್‍ನಹಾ ಕ್ಷೇತ್ರದಿಂದ ಗೆದ್ದಿರುವ ಮಾಜಿ ಸಾರಿಗೆ ಸಚಿವ ವಾರ್ರಿಂಗ್ ಅವರಿಗೆ 21 ಕಮಾಂಡೊಗಳ ಭದ್ರತೆ ಇತ್ತು. ಭಟಿಂಡಾ ನಗರ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಮಾಜಿ ಹಣಕಾಸು ಸಚಿವ ಮನ್‍ಪ್ರೀತ್ ಅವರಿಗೆ 19 ಭದ್ರತಾ ಸಿಬ್ಬಂದಿ ಇದ್ದರು ಹಾಗೂ ಅಶು ಅವರಿಗೆ 16 ಮಂದಿ ರಕ್ಷಕರಿದ್ದರು. ಮತ್ತೊಬ್ಬ ಸಚಿವ ಪರ್ಗತ್ ಸಿಂಗ್ ಅವರಿಗೆ 17 ಪೊಲೀಸರ ಭದ್ರತೆ ಇತ್ತು. 14 ಭದ್ರತಾ ಸಿಬ್ಬಂದಿ ಹೊಂದಿದ್ದ ಬ್ರಹ್ಮ ಮಹೀಂದ್ರ, 15 ಮಂದಿಯ ರಕ್ಷಣೆ ಹೊಂದಿದ್ದ ಸಂಗತ್ ಸಿಂಗ್ ಗಿಲ್ಝಿಯಾನ್ ಮತ್ತು ರಣದೀಪ್ ನಾಭ, 14 ಮಂದಿಯ ಭದ್ರತೆ ಹೊಂದಿದ್ದ ಅರುಣಾ ಚೌಧರಿ, ಸುಖ್ವೀಂದರ್ ಸಕಾರಿಯಾ, ರಾಣಾ ಗುರುಪ್ರೀತ್ ಸಿಂಗ್ ಮತ್ತು ತೃಪ್ತಿ ರಾಜೀಂದರ್ ಬಾಜ್ವಾ, ರಾಣಾ ಕೆ.ಪಿ.ಸಿಂಗ್ ಅವರ ಭದ್ರತೆಯನ್ನೂ ವಾಪಾಸು ಪಡೆಯಲಾಗಿದೆ.

ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಕೂಡಾ ಭದ್ರತೆ ಕಳೆದುಕೊಳ್ಳಲಿದ್ದಾರೆ. ಮಾಜಿ ಸಚಿವ ಸುಖಜೀಂದರ್ ರಾಂಡ್ವಾ ಅವರೊಬ್ಬರ ಹೆಸರನ್ನು ಮಾತ್ರ ಭದ್ರತಾ ಸಿಬ್ಬಂದಿಯನ್ನು ಕಳೆದುಕೊಳ್ಳಲಿರುವ ಗಣ್ಯರ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News