ದಿಲ್ಲಿ ಜಿಲ್ಲಾ ಪೊಲೀಸ್ ಆಯುಕ್ತರ ಕಾರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಪೇಟಿಎಂ ಸಂಸ್ಥಾಪಕನನ್ನು ಬಂಧಿಸಿ, ಬಿಡುಗಡೆ

Update: 2022-03-13 05:42 GMT

ಹೊಸದಿಲ್ಲಿ: ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಅವರನ್ನು ದಿಲ್ಲಿ ಪೊಲೀಸರು ಕಳೆದ ತಿಂಗಳು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಪೇಟಿಎಂ ಸಂಸ್ಥಾಪಕ ಶರ್ಮಾ ಜಾಗ್ವಾರ್ ಲ್ಯಾಂಡ್ ರೋವರ್ ಕಾರ್ ಅನ್ನು ಚಾಲನೆ ಮಾಡುತ್ತಿದ್ದು, ಅವರ ಕಾರು  ದಕ್ಷಿಣ ದಿಲ್ಲಿಯ ಜಿಲ್ಲಾ ಪೊಲೀಸ್ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಫೆಬ್ರವರಿ 22 ರಂದು ಮದರ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊರಗೆ ಡಿಸಿಪಿ ಬೆನಿಟಾ ಮೇರಿ ಜೈಕರ್ ಅವರ ಕಾರಿಗೆ ವೇಗವಾಗಿ ಬಂದ ಲ್ಯಾಂಡ್ ರೋವರ್ ಡಿಕ್ಕಿ ಹೊಡೆದಿತ್ತು. ಶರ್ಮಾ ಸ್ಥಳದಿಂದ ಪರಾರಿಯಾಗಿದ್ದರು.

ಡಿಸಿಪಿ ಅವರ ಕಾರನ್ನು ಅವರ ಚಾಲಕ, ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಓಡಿಸುತ್ತಿದ್ದರು ಕುಮಾರ್ ಅವರು ಲ್ಯಾಂಡ್ ರೋವರ್ ನಂಬರ್ ಅನ್ನು ಬರೆದಿಟ್ಟುಕೊಂಡರು ಮತ್ತು ತಕ್ಷಣ ಡಿಸಿಪಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ  ಕಾರನ್ನು ಗುರುಗ್ರಾಮ್‌ನ ಕಂಪನಿಯೊಂದಕ್ಕೆ ನೋಂದಾಯಿಸಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕಾರು ದಕ್ಷಿಣ ದಿಲ್ಲಿಯಲ್ಲಿ ನೆಲೆಸಿರುವ ವಿಜಯ್ ಶಂಕರ್ ಶರ್ಮಾ ಅವರ ಬಳಿ ಇದೆ ಎಂದು ಕಂಪನಿಯವರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ವಿಜಯ್ ಶೇಖರ್ ಶರ್ಮಾ ಅವರನ್ನು ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ ಪ್ರಕರಣದಲ್ಲಿ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು  ದಿಲ್ಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ,ಖಚಿತಪಡಿಸಿದ್ದಾರೆ.

ಶಾಲಾ ಶಿಕ್ಷಕರ ಮಗ ನಾಗಿರುವ ವಿಜಯ್ ಶೇಖರ್ ಶರ್ಮಾ ಎಂಜಿನಿಯರಿಂಗ್ ಪದವೀಧರನಾಗಿದ್ದು, 2010 ರಲ್ಲಿ ತಂತ್ರಜ್ಞಾನ ಕಂಪನಿ ಪೇಟಿಎಂ ಅನ್ನು ಸ್ಥಾಪಿಸಿದ್ದರು. ಇದನ್ನು ಆರಂಭದಲ್ಲಿ ಮೊಬೈಲ್ ರೀಚಾರ್ಜ್‌ಗಳಿಗೆ ವೇದಿಕೆಯಾಗಿ ಬಳಸಲಾಯಿತು. ಉಬರ್ ಇದನ್ನು ತ್ವರಿತ ಪಾವತಿ ಆಯ್ಕೆಯಾಗಿ ಪಟ್ಟಿ ಮಾಡಿದ ನಂತರ ತ್ವರಿತ ಬೆಳವಣಿಗೆಯನ್ನು ಕಂಡಿತು. ಕಂಪನಿಯ ಯಶಸ್ಸು ವಿಜಯ್ ಶರ್ಮಾ ಅವರನ್ನು 2.4 ಬಿಲಿಯನ್ ಅಮೆರಿಕನ್ ಡಾಲರ್  ನಿವ್ವಳ ಮೌಲ್ಯದೊಂದಿಗೆ ಬಿಲಿಯನೇರ್ ಆಗಿ ಪರಿವರ್ತಿಸಿದೆ ಎಂದು ಫೋರ್ಬ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News