ಪ.ಬಂಗಾಳ ಉಪಚುನಾವಣೆ: ಶತ್ರುಘ್ನ ಸಿನ್ಹಾ,ಬಾಬುಲ್ ಸುಪ್ರಿಯೊ ಟಿಎಂಸಿ ಅಭ್ಯರ್ಥಿಗಳಾಗಿ ಕಣಕ್ಕೆ

Update: 2022-03-13 14:19 GMT
PTI PHOTO

ಕೋಲ್ಕತಾ,ಮಾ.13: ಪ.ಬಂಗಾಳದಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರಕ್ಕೆ ನಟ ಶತ್ರುಘ್ನ ಸಿನ್ಹಾ ಮತ್ತು ಬಾಲಿಗಂಜ್ ವಿಧಾನಸಭಾ ಕ್ಷೇತ್ರಕ್ಕೆ ಗಾಯಕ ಬಾಬುಲ್ ಸುಪ್ರಿಯೊ ಅವರನ್ನು ತನ್ನ ಅಭ್ಯರ್ಥಿಗಳನ್ನಾಗಿ ತೃಣಮೂಲ ಕಾಂಗ್ರೆಸ್ ರವಿವಾರ ಪ್ರಕಟಿಸಿದೆ.

ಸಿನ್ಹಾ ಮತ್ತು ಸುಪ್ರಿಯೊ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಗಳಲ್ಲಿ ಸಚಿವರಾಗಿದ್ದರು. ಸಿನ್ಹಾ 2019ರಲ್ಲಿ ಮತ್ತು ಸುಪ್ರಿಯೊ 2021ರಲ್ಲಿ ಬಿಜೆಪಿಯನ್ನು ತೊರೆದಿದ್ದರು. ಬಿಜೆಪಿಯನ್ನು ತೊರೆದು ಟಿಎಂಸಿಗೆ ಸೇರ್ಪಡೆಗೊಂಡ ಒಂದು ತಿಂಗಳ ಬಳಿಕ ಕಳೆದ ಅಕ್ಟೋಬರ್‌ನಲ್ಲಿ ಸುಪ್ರಿಯೊ ಅಸನ್ಸೋಲ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ಈ ಕ್ಷೇತ್ರ ತೆರವಾಗಿದೆ.

2019ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ಸುಪ್ರಿಯೊ ನರೇಂದ್ರ ಮೋದಿ ಸಂಪುಟದಿಂದ ತನ್ನನ್ನು ಕೈಬಿಟ್ಟ ಬಳಿಕ ಕಳೆದ ಜುಲೈನಲ್ಲಿ ಸಕ್ರಿಯ ರಾಜಕೀಯವನ್ನು ತೊರೆದಿದ್ದರು. ಬಿಜೆಪಿಯನ್ನು ಬಿಟ್ಟ ಬಳಿಕ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದ ಸಿನ್ಹಾ ಅದನ್ನೂ ತೊರೆದು ಟಿಎಂಸಿಗೆ ಸೇರಲಿದ್ದಾರೆ ಎಂದು ಕಳೆದ ಜುಲೈನಲ್ಲಿ ಕೆಲವು ಮಾಧ್ಯಮ ವರದಿಗಳು ಸೂಚಿಸಿದ್ದವಾದರೂ ಸಿನ್ಹಾ ಅಥವಾ ಪಕ್ಷ ಅದನ್ನು ದೃಢಪಡಿಸಿರಲಿಲ್ಲ.

ಹಾಲಿ ಶಾಸಕ ಹಾಗೂ ಪ.ಬಂಗಾಳದ ಸಚಿವ ಸುಬ್ರತಾ ಮುಖರ್ಜಿಯವರು ಕಳೆದ ನ.5ರಂದು ಹೃದಯಾಘಾತದಿಂದ ನಿಧನರಾಗಿದ್ದರಿಂದ ಬಾಲಿಗಂಜ್ ಕ್ಷೇತ್ರವು ತೆರವಾಗಿದೆ.
ಈ ಎರಡೂ ಕ್ಷೇತ್ರಗಳಿಗೆ ಎ.12ರಂದು ಉಪಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದ್ದು,ಎ.16ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.

ಇದೇ ವೇಳೆ ಛತ್ತೀಸ್‌ಗಡದ ಖೈರಾಗಡ,ಬಿಹಾರದ ಬೋಚಹಾನ್ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ ಉತ್ತರ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News