ಎಲ್ಎಸಿಯಲ್ಲಿ ಸಂಘರ್ಷ: ಮಾತುಕತೆಗಳನ್ನು ಮುಂದುವರಿಸಲು ಭಾರತ, ಚೀನಾ ಒಪ್ಪಿಗೆ

Update: 2022-03-13 14:34 GMT
photo pti

ಹೊಸದಿಲ್ಲಿ,ಮಾ.13: ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯುದ್ದಕ್ಕೂ ತಮ್ಮ ನಡುವಿನ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಲು ಪರಸ್ಪರ ಸ್ವೀಕಾರಾರ್ಹ ನಿರ್ಣಯಕ್ಕೆ ತಲುಪಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆಗಳನ್ನು ಮುಂದುವರಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.

‌ಶುಕ್ರವಾರ ಉಭಯ ದೇಶಗಳ ಮಿಲಿಟರಿ ಕಮಾಂಡರ್‌ಗಳು ಈ ವಿಷಯದಲ್ಲಿ ಚುಷುಲ್-ಮೊಲ್ಡೊ ಗಡಿ ಸಭೆ ಕೇಂದ್ರದ ಭಾರತೀಯ ಭಾಗದಲ್ಲಿ 15ನೇ ಸುತ್ತಿನ ಮಾತುಕತೆಗಳನ್ನು ನಡೆಸಿದ್ದರು.

ಮಧ್ಯಂತರದಲ್ಲಿ ಪಶ್ಚಿಮ ವಿಭಾಗದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲೂ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಭಾರತ ಮತ್ತು ಚೀನಾ ಸರಕಾರಗಳು ಶನಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

2020 ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಾಗಿನಿಂದ ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟಿನಲ್ಲಿ ಸಿಲುಕಿವೆ. ಹಲವಾರು ಸುತ್ತುಗಳ ಮಾತುಕತೆಗಳ ಬಳಿಕ ಭಾರತ ಮತ್ತು ಚೀನಾ ಕಳೆದ ಆಗಸ್ಟ್‌ನಲ್ಲಿ ಗೋಗ್ರಾ ಮತ್ತು ಫೆಬ್ರವರಿಯಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶಗಳಿಂದ ತಮ್ಮ ಪಡೆಗಳನ್ನು ಹಿಂದೆಗೆದುಕೊಂಡಿದ್ದವು.

ಯಾವುದೇ ಫಲಪ್ರದ ಫಲಿತಾಂಶವನ್ನು ಕಂಡುಕೊಳ್ಳಲು ಉಭಯ ದೇಶಗಳಿಗೆ ಸಾಧ್ಯವಾಗಿಲ್ಲ,ಆದರೆ ಮಾತುಕತೆಗಳು ಧನಾತ್ಮಕವಾಗಿದ್ದವು ಎಂದು ಅನಾಮಿಕ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಆದರೆ ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್‌ನಂತಹ ಇತರ ಕಡೆಗಳಲ್ಲಿ ಬಿಕ್ಕಟ್ಟು ಮುಂದುವರಿದಿದೆ.

ಸಂಘರ್ಷವನ್ನು ಬಗೆಹರಿಸಲು ಉಭಯ ದೇಶಗಳು ಅಭಿಪ್ರಾಯಗಳನ್ನು ವಿನಿಮಯಿಸಿಕೊಂಡಿವೆ. ಬಿಕ್ಕಟ್ಟಿಗೆ ಪರಿಹಾರವು ಪಶ್ಚಿಮ ವಿಭಾಗದಲ್ಲಿಯ ಎಲ್ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿ ಮರುಸ್ಥಾಪನೆಗೆ ನೆರವಾಗಲಿದೆ ಹಾಗೂ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಗೆ ಪೂರಕವಾಗಲಿದೆ ಎಂದು ಉಭಯ ದೇಶಗಳು ಪುನರ್ದೃಢಪಡಿಸಿವೆ ಎಂದೂ ಶನಿವಾರದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News