ಇರಾಕ್: ಎರ್ಬಿಲ್ ನಗರವನ್ನು ಗುರಿಯಾಗಿಸಿ ಸರಣಿ ಕ್ಷಿಪಣಿ ದಾಳಿ

Update: 2022-03-13 18:08 GMT

ಬಗ್ದಾದ್, ಮಾ.13: ಇರಾಕ್ ನ ಖುರ್ದ್ ಪ್ರಾಂತದ ರಾಜಧಾನಿ ಎರ್ಬಿಲ್ ನಗರದ ಮೇಲೆ ರವಿವಾರ ಬೆಳಿಗ್ಗೆ ಸರಣಿ ಕ್ಷಿಪಣಿ ದಾಳಿ ನಡೆದಿರುವುದಾಗಿ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಅಪ್ಪಳಿಸಿದರೂ ಎರ್ಬಿಲ್ ನಗರ ಎಂದಿನಂತೆಯೇ ಶಾಂತಸ್ಥಿತಿಯಲ್ಲಿದೆ. ಕ್ಷಿಪಣಿ ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಕೆಲ ವಸ್ತುಗಳಿಗೆ ಹಾನಿಯಾಗಿದೆ. ಎರ್ಬಿಲ್ ನಲ್ಲಿ ನೂತನವಾಗಿ ಆರಂಭಿಸಲಾದ ಅಮೆರಿಕ ದೂತಾವಾಸ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಗುರಿಯಾಗಿಸಿ ಇರಾಕ್ನ ಪೂರ್ವ ಗಡಿಭಾಗದಿಂದ ದಾಳಿ ನಡೆದಿದೆ ಎಂದು ಕುರ್ಡಿಶ್ ಪ್ರಾದೇಶಿಕ ಸರಕಾರದ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಇರಾನ್ ನಿಂದ ಕ್ಷಿಪಣಿ ಉಡಾಯಿಸಲಾಗಿದೆ ಎಂದು ಅಮೆರಿಕದ ಅಧಿಕಾರಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ಸಂಘಟನೆ ದಾಳಿಯ ಹೊಣೆ ವಹಿಸಿಕೊಂಡಿಲ್ಲ. ಇದೊಂದು ಅತಿರೇಕದ ಉಪಕ್ರಮ ಎಂದು ಬಣ್ಣಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು, ಎರ್ಬಿಲ್ನಲ್ಲಿ ಇರುವ ಅಮೆರಿಕ ಸರಕಾರದ ಸೌಲಭ್ಯಗಳಿಗೆ ಹಾನಿಯಾಗಿಲ್ಲ ಎಂದಿದ್ದಾರೆ. ಕುರ್ಡಿಶ್ ಪ್ರಾಂತದ ಪ್ರಧಾನಿ ಮಸ್ರೂರ್ ಬರ್ಝಾನಿ ದಾಳಿಯನ್ನು ಖಂಡಿಸಿದ್ದು ಜನತೆ ತಾಳ್ಮೆಯಿಂದ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

ಎರ್ಬಿಲ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟಡ ಸಂಕೀರ್ಣದ ಬಳಿ ಇರುವ ಕಟ್ಟಡದಲ್ಲಿ ಅಮೆರಿಕದ ಪಡೆಯನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದ್ದು ಈ ಪ್ರದೇಶವನ್ನು ಗುರಿಯಾಗಿಸಿ ಈ ಹಿಂದೆಯೂ ಹಲವು ಬಾರಿ ರಾಕೆಟ್ ಮತ್ತು ಡ್ರೋನ್ ದಾಳಿ ನಡೆದಿದೆ. ಇರಾನ್ ಬೆಂಬಲಿತ ಬಂಡುಗೋರರ ಪಡೆ ಈ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News