ಚಿಲಿ: ನೂತನ ಅಧ್ಯಕ್ಷರ ಪದಗ್ರಹಣ

Update: 2022-03-13 18:24 GMT
PHOTO COURTESY:TWITTER

ಸಾವೊಪೌಲೊ, ಮಾ.13: ದೇಶದ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯ ನಿರೀಕ್ಷೆಯೊಂದಿಗೆ ದಕ್ಷಿಣ ಅಮೆರಿಕದ ಚಿಲಿ ದೇಶದ ನೂತನ ಅಧ್ಯಕ್ಷರಾಗಿ ಗ್ಯಾಬ್ರಿಯಲ್ ಬೋರಿಚ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಚಿಲಿ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿರುವ ಅಸಮಾನತೆಯನ್ನು ನಿವಾರಿಸಿ ದೇಶದ ಆರ್ಥಿಕತೆಗೆ ಹೊಸ ದಿಕ್ಕನ್ನು ಬೋರಿಚ್ ತೋರಲಿದ್ದಾರೆ ಎಂಬ ನಿರೀಕ್ಷೆ ಜನಸಾಮಾನ್ಯರಲ್ಲಿದೆ. ಅಲ್ಲದೆ ಚಿಲಿಯಲ್ಲಿ ನೆಲೆಸಿರುವ ಸುಮಾರು 5 ಲಕ್ಷ ಪೆಲೆಸ್ತೀನಿಯರು ನೂತನ ಅಧ್ಯಕ್ಷರು ಇಸ್ರೇಲ್-ಪೆಲೆಸ್ತೀನ್ ಬಿಕ್ಕಟ್ಟಿನ ವಿಷಯದಲ್ಲಿ ಹೊಸ ದೃಷ್ಟಿಕೋನದಿಂದ ವ್ಯವಹರಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.


ವಿದ್ಯಾರ್ಥಿ ನಾಯಕನಾಗಿ , ಸಾಮಾಜಿಕ ಕಾರ್ಯಕರ್ತನಾಗಿ ಜನಮನ್ನಣೆ ಗಳಿಸಿದ ಬೋರಿಚ್ ಸಂಸದ್ ಸದಸ್ಯನಾಗಿ ಆಯ್ಕೆಯಾಗುವ ಮೊದಲೇ ಪೆಲೆಸ್ತೀನಿಯರ ವಿಷಯದಲ್ಲಿ ಇಸ್ರೇಲ್ನ ಕಾರ್ಯನೀತಿಯ ಕಟು ಟೀಕಾಕಾರನಾಗಿದ್ದರು. ಸಂಸದ್ ಸದಸ್ಯನಾಗಿ ಆಯ್ಕೆಗೊಂಡ ಬಳಿಕ ಅವರು ಪೆಲೆಸ್ತೀನ್ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಮತ್ತು 2018ರಲ್ಲಿ ಇತರ ಕೆಲವು ಸಂಸದ್ ಸದಸ್ಯರೊಂದಿಗೆ ಪೆಲೆಸ್ತೀನ್ಗೆ ಭೇಟಿ ನೀಡಿದ್ದರು.
ಪೆಲೆಸ್ತೀನ್ ದುರಂತ ಅವರಿಗೆ ತಿಳಿದಿದೆ ಮತ್ತು ಆಕ್ರಮಿತ ಪ್ರದೇಶಗಳಲ್ಲಿ ಪೆಲೆಸ್ತೀನಿಯರ ಜೀವನ ಪರಿಸ್ಥಿತಿಯನ್ನು ಕಣ್ಣಾರೆ ಕಂಡವರು. ತಾನೋರ್ವ ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕ ಎಂದವರು ಹಲವು ಬಾರಿ ದೃಢಪಡಿಸಿದ್ದಾರೆ ಎಂದು ಚಿಲಿ-ಪೆಲೆಸ್ತೀನ್ ರಾಜಕೀಯ ವಿಶ್ಲೇಷಕ ಜೆಮಿ ಅಬಿದ್ರಪೊ ಹೇಳಿದ್ದಾರೆ. ಬೋರಿಚ್ ಅವರು ಎಲ್ಲಾ ದೇಶಗಳ ಸ್ವ-ನಿರ್ಣಯದ ಹಕ್ಕುಗಳಿಗೆ ಬದ್ಧವಾಗಿದ್ದಾರೆ ಮತ್ತು ಯಾವುದೇ ರೀತಿಯ ಅಕ್ರಮ ಅತಿಕ್ರಮಣ ಮತ್ತು ವಸಾಹತುಶಾಹಿಯನ್ನು ತಿರಸ್ಕರಿಸುತ್ತಾರೆ ಎಂದು ಚಿಲಿಯಲ್ಲಿನ ಪೆಲೆಸ್ತೀನ್ ಸಂಘಟನೆಯ ಯುವಘಟಕದ ನಿರ್ದೇಶಕ ಮಹೆರ್ ಪಿಕಾರ ಅಬುಯೆದ್ ಹೇಳಿಕೆಯನ್ನು ಉಲ್ಲೇಖಿಸಿ ಅರಬ್ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News