ಮಧ್ಯಪ್ರದೇಶ: ದರ್ಗಾದಲ್ಲಿ ದಾಂಧಲೆಗೈದು ಕೇಸರಿ ಬಣ್ಣ ಬಳಿದ ಗುಂಪು; ವರದಿ
ಹೊಸದಿಲ್ಲಿ: ಮಧ್ಯಪ್ರದೇಶದ ನರ್ಮದಾಪುರಂ ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ದರ್ಗಾದಲ್ಲಿ ದಾಂಧಲೆಗೈದ ದುಷ್ಕರ್ಮಿಗಳ ಗುಂಪೊಂದು ನಂತರ ಅದರ ಗೋಡೆಗೆ ಕೇಸರಿ ಬಣ್ಣ ಬಳಿದ ಘಟನೆ ರವಿವಾರ ಮುಂಜಾನೆ ನಡೆದಿದೆ. ಈ ಪ್ರದೇಶದಲ್ಲಿ ಇಂತಹ ಘಟನೆ ಕಳೆದೆರಡು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ನಡೆಯುತ್ತಿದೆ ಎಂದು indianexpress.com ವರದಿ ಮಾಡಿದೆ.
ಸುಮಾರು 50 ವರ್ಷ ಹಳೆಯ ಈ ದರ್ಗಾದ ಗೋಪುರ ಮತ್ತು ಪ್ರವೇಶ ದ್ವಾರಕ್ಕೆ ಅಪರಿಚಿತ ವ್ಯಕ್ತಿಗಳು ಕೇಸರಿ ಬಣ್ಣ ಬಳಿದಿದ್ದಾರೆ. ಅಲ್ಲಿನ ಬಾಗಿಲುಗಳನ್ನು ಒಡೆದು ಅವುಗಳನ್ನು ಮಾರು ನದಿಗೆಸೆಯಲಾಗಿದೆ ಹಾಗೂ ಹ್ಯಾಂಡ್‍ಪಂಪ್ ಒಂದನ್ನೂ ಕಿತ್ತೆಸೆಯಲಾಗಿದೆ ಎಂದು ಅಲ್ಲಿನ ಉಸ್ತುವಾರಿಯಾಗಿರುವ ಅಬ್ದುಲ್ ಸತ್ತಾರ್ ದೂರಿದ್ದಾರೆ.
ಈ ಘಟನೆ ಕುರಿತು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರೂ ರಾಜ್ಯ ಹೆದ್ದಾರಿಗೆ ಗ್ರಾಮಸ್ಥರು ತಡೆಯೊಡ್ಡುವ ತನಕ ಪೊಲೀಸರು ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಂತರ ಎಫ್‍ಐಆರ್ ದಾಖಲಾಗಿದ್ದು ಪ್ರಸ್ತುತ ಧಾರ್ಮಿಕ ಸ್ಥಳಕ್ಕೆ ಮತ್ತೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಈ ಕೃತ್ಯ ಸ್ಥಳೀಯರದ್ದಲ್ಲವೆಂದು ತೋರುತ್ತಿದೆ, ಸ್ಥಳೀಯ ವಿಭಿನ್ನ ಸಮುದಾಯದ ಜನರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.
ಒಂದು ತಿಂಗಳ ಹಿಂದೆ ನರ್ಮದಾಪುರಂ ಜಿಲ್ಲೆಯ ಪಚಮರ್ಹಿ ಎಂಬಲ್ಲಿ ಇಂತಹುದೇ ಘಟನೆ ನಡೆದಿದ್ದು ಎರಡೂ ಘಟನೆಗಳ ನಡುವೆ ಸಂಬಂಧವಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.