ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಮತ ಹಾಕಿದವರಿಗೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ ಎಂದ ಬಿಜೆಪಿ ಶಾಸಕ

Update: 2022-03-14 15:15 GMT
Photo: Twitter/S Rajen Singh.

ಮಣಿಪುರ: ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಮತ ಹಾಕಿದವರು ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯುವುದಿಲ್ಲ ಎಂದು ಮಣಿಪುರದ ಚುನಾಯಿತ ಶಾಸಕ ಸೊರೊಖೈಬಾಮ್ ರಾಜೇನ್ ಸಿಂಗ್ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ ಎಂದು ಇಂಫಾಲ್ ಟೈಮ್ಸ್ ರವಿವಾರ ವರದಿ ಮಾಡಿದೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಲಮ್ಸಾಂಗ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾಗಿರುವ ರಾಜೇನ್‌ ಸಿಂಗ್‌ ರವಿವಾರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜ್ಯದ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿರುವ ಸಿಂಗ್, ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಮತ ಹಾಕಿದವರು "ತಮ್ಮ ಐದು ವರ್ಷಗಳ ಮೌಲ್ಯಗಳನ್ನು ಮಾರಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

"ಲಮ್ಸಾಂಗ್ ಅಸೆಂಬ್ಲಿ ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವರಿಗೆ ಯಾವುದೇ ಹಕ್ಕುಗಳಿಲ್ಲ" ಎಂದು ಅವರು ಹೇಳಿರುವುದಾಗಿ ಇಂಫಾಲ್ ಟೈಮ್ಸ್ ವರದಿ ಹೇಳಿದೆ.

 ಅಸೆಂಬ್ಲಿ ಚುನಾವಣೆಯಲ್ಲಿ, ರಾಜೇನ್‌ ಸಿಂಗ್ ಅವರು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಪುಖ್ರಾಂಬನ್ ಸುಮತಿ ದೇವಿ ಅವರನ್ನು 400 ಮತಗಳಿಂದ ಸೋಲಿಸಿದ್ದರು.

ಮಣಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದ್ದು, ವಿಧಾನಸಭೆಯ 60 ಸ್ಥಾನಗಳಲ್ಲಿ 32 ಸ್ಥಾನಗಳನ್ನು ಗೆದ್ದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News