ಗ್ರಾಹಕರಿಗೆ ಹೆಚ್ಚಿನ ಇಂಧನ ದರಗಳ ಹೊರೆಯನ್ನು ತಗ್ಗಿಸಲು ಸರಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ: ಕೇಂದ್ರ ಸಚಿವ

Update: 2022-03-14 16:41 GMT
Photo: PTI

ಹೊಸದಿಲ್ಲಿ,ಮಾ.14: ತೈಲದರಗಳು ಗಗನಚುಂಬಿಯಾಗುತ್ತಿರುವ ನಡುವೆಯೇ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು,ಬಳಕೆದಾರರಿಗೆ ಹೆಚ್ಚಿನ ಇಂಧನ ದರಗಳ ಹೊರೆಯನ್ನು ತಗ್ಗಿಸಲು ಸರಕಾರವು ಮುಂಬರುವ ತಿಂಗಳುಗಳಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿಗೆ ತರುವ ಪ್ರಸ್ತಾವವನ್ನು ಜಿಎಸ್‌ಟಿ ಮಂಡಳಿ ಕೈಗೆತ್ತಿಕೊಂಡಿತ್ತಾದರೂ ಅದಕ್ಕೆ ಒಲವು ವ್ಯಕ್ತವಾಗಿಲ್ಲ ಎಂದೂ ಪುರಿ ತಿಳಿಸಿದರು.

ಭಾರತವು ತನ್ನ ಅಗತ್ಯದ ಶೇ.85ರಷ್ಟು ತೈಲವನ್ನು ಸಾಗರೋತ್ತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ,ಹೀಗಾಗಿ ಅದು ಏಷ್ಯಾದಲ್ಲಿ ಹೆಚ್ಚಿನ ತೈಲ ಬೆಲೆಗಳಿಗೆ ಅತ್ಯಂತ ಸುಲಭಭೇದ್ಯವಾಗಿದೆ.

ಪುರಿ ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮಾರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಜಿಎಸ್‌ಟಿಯನ್ನು ಜಾರಿಗೊಳಿಸುವ ಸಂದರ್ಭ ಪೆಟ್ರೋಲಿಯಂ ಉತ್ಪನ್ನಗಳನ್ನು ಅಂತಿಮವಾಗಿ ಅದರಡಿಗೆ ತರುವ ಬಗ್ಗೆ ಸರಕಾರ ಮತ್ತು ಪ್ರತಿಪಕ್ಷಗಳು ಒಪ್ಪಿಕೊಂಡಿದ್ದವು ಎನ್ನುವುದನ್ನು ನೆನಪಿಸಿದ್ದ ಶರ್ಮಾ,ಈ ನಿಟ್ಟಿನಲ್ಲಿ ಸಾಧಿಸಲಾಗಿರುವ ಪ್ರಗತಿಯ ಬಗ್ಗೆ ತಿಳಿಯಲು ಬಯಸಿದ್ದರು.

 ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ (ಈ ಪಟ್ಟಿಗೆ ನಾನು ಮದ್ಯವನ್ನೂ ಸೇರಿಸಬಹುದು) ಅತ್ಯಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿರುವ ರಾಜ್ಯಗಳು ಈ ಆದಾಯವನ್ನು ಕಡಿಮೆ ಮಾಡಿಕೊಳ್ಳಲು ಸಾಮಾನ್ಯವಾಗಿ ಹಿಂದೇಟು ಹೊಡೆಯುತ್ತವೆ ಎಂದ ಪುರಿ,ಆದಾಗ್ಯೂ ಬಳಕೆದಾರರಿಗೆ ಹೆಚ್ಚಿನ ಹೊರೆ ಬೀಳದಂತಿರಲು ಸರಕಾರವು ಮುಂಬರುವ ತಿಂಗಳುಗಳಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಜಾಗತಿಕ ಕಚ್ಚಾತೈಲ ದರವು ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ಗೆ 130 ಡಾ.ಗೆ ಏರಿಕೆಯಾಗಿದ್ದು,ಸದ್ಯ 109 ಡಾ.ಆಸುಪಾಸಿನಲ್ಲಿದೆ. ಇದಕ್ಕೆ ಯುದ್ಧಸದೃಶ ಸ್ಥಿತಿ ಕಾರಣವೆಂದು ಪುರಿ ರಷ್ಯ-ಉಕ್ರೇನ್ ನಡುವಿನ ಸಂಘರ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News