ಇಂಡೊನೇಶ್ಯ, ಫಿಲಿಪ್ಪೀನ್ಸ್‌ನಲ್ಲಿ ಭೂಕಂಪ

Update: 2022-03-14 17:17 GMT

ಜಕಾರ್ತ, ಮಾ.14: ಇಂಡೊನೇಶ್ಯ ಮತ್ತು ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ನೀರಿನ ಒಳಗೆ ಪ್ರಬಲವಾದ ಭೂಕಂಪ ಸಂಭವಿಸಿದ್ದು ಜನ ಆತಂಕಗೊಂಡರು. ಆದರೆ ಗಂಭೀರ ಸಾವುನೋವು, ನಾಶನಷ್ಟದ ವರದಿಯಾಗಿಲ್ಲ ಮತ್ತು ಸುನಾಮಿ ಸಂಭವಿಸುವ ಭೀತಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಇಂಡೋನೇಶ್ಯಾದ ಪಶ್ಚಿಮ ಸುಮಾತ್ರ ಪ್ರಾಂತದ ಪರಿಯಾಮನ್ ನಗರದಲ್ಲಿ ಸೋಮವಾರ 6.7 ತೀವ್ರತೆಯ ಭೂಕಂಪ ಸಂಭವಿಸಿದ್ದು 169 ಕಿ.ಮೀ ದೂರದಲ್ಲಿ ಭೂಮಿಯ 16 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಉತ್ತರ ಸುಮಾತ್ರದ ನಿಯಾಸ್ ಜಿಲ್ಲೆಯ ಪಶ್ಚಿಮದಲ್ಲಿ ಭೂಕಂಪ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ಹೇಳಿದೆ.

ಸೋಮವಾರ ಬೆಳಿಗ್ಗೆ ಸುಮಾತ್ರ ಪ್ರಾಂತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಆದರೆ ಸುನಾಮಿಯ ಎಚ್ಚರಿಕೆ ನೀಡಲಾಗಿಲ್ಲ ಎಂದು ಇಂಡೊನೇಶ್ಯಾದ ಪವನಶಾಸ್ತ್ರ ಇಲಾಖೆ ಹೇಳಿದೆ. ಇದೇ ಸಂದರ್ಭ, ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿಯೂ ಸೋಮವಾರ 6.4 ಡಿಗ್ರಿ ತೀವ್ರತೆಯ ಭೂಕಂಪ ಸಂಭವವಿಸಿದೆ. ಸಮುದ್ರದಲ್ಲಿ ಬೃಹದಾಕಾರದ ಅಲೆಗಳು ಎದ್ದಿದ್ದು ತೀರ ಪ್ರದೇಶದ ಜನತೆ ಆತಂಕಗೊಂಡರು. ಮನಿಲಾದ ದಕ್ಷಿಣದಲ್ಲಿರುವ ಲುಬಾಂಗ್ ದ್ವೀಪದ 110 ಕಿ.ಮೀ ಪಶ್ಚಿಮದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಫಿಲಿಪ್ಪೀನ್ಸ್‌ನ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಇಲಾಖೆ ಹೇಳಿದೆ.

ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ. ಸಮುದ್ರದಲ್ಲಿ ಬೃಹತ್ ಅಲೆಗಳು ಕಾಣಿಸಿಕೊಂಡಿದ್ದರೂ ಸುನಾಮಿಯ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News