ಉಕ್ರೇನ್ ಸೇನೆಯ ದಾಳಿಯಲ್ಲಿ 16 ಜನರ ಸಾವು: ಬಂಡುಗೋರ ಪಡೆ ಹೇಳಿಕೆ

Update: 2022-03-14 18:18 GMT

ಕೀವ್, ಮಾ.14: ಪೂರ್ವ ಉಕ್ರೇನ್‌ನಲ್ಲಿ ರಶ್ಯ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ಡೊನೆಟ್ಸ್ಕ್ ನಗರದ ಮೇಲೆ ಉಕ್ರೇನ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಟ 16 ಮಂದಿ ಮೃತಪಟ್ಟಿದ್ದು ಇತರ 23 ಮಂದಿ ಗಾಯಗೊಂಡಿರುವುದಾಗಿ ಪ್ರತ್ಯೇಕತಾವಾದಿಗಳ ಮುಖಂಡರು ಹೇಳಿದ್ದಾರೆ.

ದಾಳಿಯಿಂದ ಹಾನಿಗೊಳಗಾದ ಕಟ್ಟಡಗಳು, ವಾಹನಗಳು ಹಾಗೂ ಮೃತದೇಹಗಳ ಫೋಟೊವನ್ನು ಪ್ರತ್ಯೇಕತಾವಾದಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಉಕ್ರೇನ್ ಸೇನೆಯ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದು ಈ ಪ್ರಮಾಣ ಇನ್ನಷ್ಟು ಹೆಚ್ಚಬಹುದು. ಕನಿಷ್ಟ 23 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಉಕ್ರೇನ್ ಸೇನೆ ಉಡಾಯಿಸಿದ ತೋಚ್ಕಾ ಕ್ಷಿಪಣಿಯನ್ನು ತಮ್ಮ ಪಡೆ ತಡೆದಿದ್ದು ಕ್ಷಿಪಣಿ ನಗರದ ಜನವಸತಿ ಪ್ರದೇಶದ ಮೇಲೆ ಬಿದ್ದು ಅಪಾರ ಸಾವುನೋವು ಸಂಭವಿಸಿದೆ ಎಂದು ಡೊನೆಸ್ಟ್ಕ್‌ನ ಸ್ವಘೋಷಿತ ಬಂಡುಗೋರ ಸರಕಾರದ ಆರೋಗ್ಯ ಸಚಿವರು ಹೇಳಿದ್ದಾರೆ.

ಈ ಮಧ್ಯೆ, ರಶ್ಯದ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ನ ಮುಖ್ಯಸ್ಥ ಡೆನಿಸ್ ಪುಷಿಲಿನ್, ತಮ್ಮ ಪಡೆ ತುಂಡರಿಸಿದ ಉಕ್ರೇನ್‌ನ ಕ್ಷಿಪಣಿ ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದು ಮಕ್ಕಳ ಸಹಿತ ಹಲವರು ಮೃತಪಟ್ಟಿದ್ದಾರೆ. ಒಂದು ವೇಳೆ ಕ್ಷಿಪಣಿಯನ್ನು ತುಂಡರಿಸದಿದ್ದರೆ ಇನ್ನಷ್ಟು ಸಾವುನೋವು ಸಂಭವಿಸಲಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News