ಬಿಹಾರ ಸಿಎಂ- ಸ್ಪೀಕರ್ ನಡುವೆ ಜಟಾಪಟಿ; ಮೈತ್ರಿ ಒಡಕು ?
ಪಾಟ್ನಾ: ಬಿಹಾರ ವಿಧಾನಸಭೆ ಸೋಮವಾರ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸ್ಪೀಕರ್ ವಿಜಯ್ ಕುಮಾರ್ ವರ್ಮಾ ನಡುವೆ ಸದನದಲ್ಲಿ ವಾಕ್ಸಮರ ನಡೆಯಿತು. ರಾಜ್ಯದಲ್ಲಿ ಬಿಜೆಪಿ- ಜೆಡಿಯು ಮೈತ್ರಿಯಲ್ಲಿ ಒಡಕು ಇದೆ ಎಂಬ ವದಂತಿಗಳಿಗೆ ಇದು ತುಪ್ಪ ಸುರಿದಿದೆ.
"ಇದು ಸದನವನ್ನು ನಡೆಸುವ ವಿಧಾನವಲ್ಲ. ಸಂವಿಧಾನ ತನ್ನಿ. ಅದನ್ನು ಓದಿ" ಎಂದು ನಿತೀಶ್ ಕುಮಾರ್ ಅವರು ಸ್ಪೀಕರ್ ಅವರನ್ನು ಕುರಿತು ಖಾರವಾಗಿ ಹೇಳಿದರು. "ಸದನವನ್ನು ನಡೆಸುತ್ತಿರುವ ವಿಧಾನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರ ಪ್ರತ್ಯೇಕತೆಗೆ ಸಂಬಂಧಿಸಿದ ಸಂವಿಧಾನಾತ್ಮಕ ರೂಢಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಕಿಡಿ ಕಾರಿದರು.
ಲಕ್ಕಿಸರಾಯ್ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಅವರು ಸದನಕ್ಕೆ ಮಾಹಿತಿ ನೀಡಬೇಕು ಎಂದು ಸ್ಪೀಕರ್ ಪ್ರಶ್ನೋತ್ತರ ಅವಧಿಯಲ್ಲಿ ಸೂಚನೆ ನೀಡಿರುವುದು ನಿತೀಶ್ ಅವರ ಕೋಪಕ್ಕೆ ಕಾರಣವಾಯಿತು. ವಿಜಯ್ ಕುಮಾರ್ ಸಿನ್ಹಾ ಅವರು ಲಕಿಸರಾಯ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ.
ಫೆಬ್ರುವರಿ 10ರಂದು ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ಮತ್ತು ಇಬ್ಬರು ಸ್ಟೇಷನ್ ಹೌಸ್ ಆಫೀಸರ್ ಗಳು ಸ್ಪೀಕರ್ ಜತೆ ಅನುಚಿತವಾಗಿ ವರ್ತಿಸಿದರು ಎಂದು ಆಪಾದಿಸಲಾಗಿದೆ. ಈ ವಿಷಯವನ್ನು ಸದನಲ್ಲಿ ಪ್ರಸ್ತಾಪಿಸಲಾಗಿದ್ದು, ಸದನದ ವಿಶೇಷ ಹಕ್ಕುಗಳ ಸಮಿತಿ ಇದನ್ನು ಪರಿಶೀಲಿಸುತ್ತಿದೆ.
ಕಳೆದ ಒಂದು ತಿಂಗಳಲ್ಲಿ ಲಕಿಸರಾನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿವೆ ಎಂದು ಗೃಹಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಹೇಳಿದರು. ಆಗ ಸ್ಪೀಕರ್ ಜತೆಗೆ ಪೊಲೀಸರು ಅನುಚಿತವಾಗಿ ವರ್ತಿಸಿದ ಪ್ರಕರಣದ ವಿಚಾರಣೆ ಪ್ರಗತಿ ಆಗಿಲ್ಲ ಎಂದು ಬಿಜೆಪಿ ಸದಸ್ಯ ಸಂಜಯ್ ಸಾರವಗಿ ಆಪಾದಿಸಿದರು. ಆಗ ಈ ಬಗ್ಗೆ ಎರಡು ದಿನಗಳ ಒಳಗಾಗಿ ಉತ್ತರ ನೀಡುವಂತೆ ಗೃಹಸಚಿವರಿಗೆ ಸಿನ್ಹಾ ಸೂಚಿಸಿದರು.
ಗೃಹ ಇಲಾಖೆಯ ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್ ಎಲ್ಲ ಕಲಾಪಗಳನ್ನು ಚೇಂಬರ್‍ನಲ್ಲಿ ಕುಳಿತೇ ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ತಕ್ಷಣ ಸದನಕ್ಕೆ ಧಾವಿಸಿದ ಅವರು, ತನಿಖೆ ನಡೆಸುತ್ತಿರುವ ಮತ್ತು ವಿಶೇಷ ಹಕ್ಕುಗಳ ಸಮಿತಿಗೆ ನೀಡಿದ ವಿಚಾರವನ್ನು ಪದೇ ಪದೇ ಸದನದಲ್ಲಿ ಪ್ರಸ್ತಾಪಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಕ್ಷೇತ್ರದಲ್ಲಿ ಆಗಿರುವ ಘಟನೆಯ ನೆರಳು ಸದನದ ಕಲಾಪದ ಮೇಲೆ ಬೀಳಲು ಸ್ಪೀಕರ್ ಅವಕಾಶ ನೀಡಬಾರದು ಎಂದು ನಿತೀಶ್ ಹೇಳಿದರು. ಇದನ್ನು ಒಪ್ಪದ ಸ್ಪೀಕರ್, "ನೀವು ಸದಾ ನಿಮ್ಮ ಸರ್ಕಾರ ಅಭಿವೃದ್ಧಿ ಮತ್ತು ನ್ಯಾಯವನ್ನು ಅನುಸರಿಸುತ್ತದೆ ಎಂದು ಹೇಳುತ್ತೀರಿ. ಆದರೆ ನಾನು ಸದನದ ರಕ್ಷಕ. ಶಾಸನಸಭೆಯ ಘನತೆಯನ್ನು ರಕ್ಷಿಸುವುದೂ ನನ್ನ ಕರ್ತವ್ಯ" ಎಂದು ತಿರುಗೇಟು ನೀಡಿದರು.