ಪಂಜಾಬ್ ಕಾಂಗ್ರೆಸ್ ಹೀನಾಯ ಸೋಲಿಗೆ ಚನ್ನಿ, ಸಿಧು ಹೊಣೆ: ಸುನೀಲ್ ಜಾಖರ್

Update: 2022-03-15 04:06 GMT
ಸುನೀಲ್ ಜಾಖರ್

ಹೊಸದಿಲ್ಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಮಾಜಿ ಮುಖ್ಯಮಂತ್ರಿ ಚರಣಜೀತ್ ಚನ್ನಿ, ರಾಜ್ಯ ಘಟಕದ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಮತ್ತು ಕೆಲ ಕೇಂದ್ರ ನಾಯಕರು ಹೊಣೆ ಎಂದು ಪಕ್ಷದ ಹಿರಿಯ ಮುಖಂಡರು ಆಪಾದಿಸಿದ್ದಾರೆ.

"ಚನ್ನಿಯವರು ಪಕ್ಷಕ್ಕೆ ಬಾಧ್ಯತೆ. ಅವರ ದುರಾಸೆಯಿಂದಾಗಿ ಪಕ್ಷ ಅವನತಿಗೆ ಸಾಗಿತು" ಎಂದು ಪಂಜಾಬ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸುನೀಲ್ ಜಾಖರ್ ನೇರ ಆರೋಪ ಮಾಡಿದ್ದಾರೆ. ಇದರ ಜತೆಗೆ ಪಂಜಾಬ್‍ನ ಉಸ್ತುವಾರಿ ಹೊಂದಿದ್ದ ಹರೀಶ್ ರಾವತ್ ಹಾಗೂ ರಾಜ್ಯಸಭಾ ಸದಸ್ಯೆ ಅಂಬಿಕಾ ಸೋನಿ ಮತ್ತು ಅವರು ಆಯ್ಕೆ ಮಾಡಿದ ಸಿಧು ಹಾಗೂ ಚನ್ನಿ ಸೋಲಿಗೆ ಸಂಪೂರ್ಣ ಹೊಣೆ ಎಂದು ಅವರು ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 117 ಸ್ಥಾನಗಳ ಪೈಕಿ 92ನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಚನ್ನಿ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಯಾಗಿ ಕಾಂಗ್ರೆಸ್ ಬಿಂಬಿಸಿತ್ತು.

ಚನ್ನಿ ಅವರ ಹೆಸರು ಶಿಫಾರಸ್ಸು ಮಾಡುವ ಮೂಲಕ ರಾವತ್ ಮತ್ತು ಸೋನಿ ಪ್ರಮಾದ ಎಸಗಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳುವ ಸಲುವಾಗಿ ಅವರನ್ನು ಪಂಜಾಬ್ ಕಾಂಗ್ರೆಸ್‍ನ ಆಸ್ತಿ ಎಂದು ಬಿಂಬಿಸಲಾಗಿತ್ತು. ಈ ಮೂಲಕ ಕೇಂದ್ರ ನಾಯಕತ್ವವನ್ನು ತಪ್ಪುದಾರಿಗೆ ಎಳೆಯಲಾಗಿದೆ. "ಮೂವತ್ತು ವರ್ಷ ರಾಜ್ಯಸಭೆಯ ಸದಸ್ಯರಾಗಿದ್ದ ಮಹಿಳೆಗೆ ಚನ್ನಿ ಆಸ್ತಿಯಾಗಿರಬಹುದು; ಆದರೆ ಅವರು ಕಾಂಗ್ರೆಸ್‍ಗೆ ಬಾಧ್ಯತೆ ಎನ್ನುವುದು ಸಾಬೀತಾಗಿದೆ. ಅವರ ಅಳಿಯನ ಮನೆ ಮೇಲೆ ಇಡಿ ದಾಳಿ ನಡೆದ ಬಳಿಕ ಅವರ ಇಮೇಜ್ ಛಿದ್ರವಾಗಿದೆ. ಹಾಗಿದ್ದೂ ಅವರನ್ನು ಕಾಂಗ್ರೆಸ್‍ನ ಮುಖ ಎಂದು ಹೇಗೆ ಬಿಂಬಿಸಲಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕತ್ವ ಸೃಷ್ಟಿಸಿದ ಆಶ್ತಿಯನ್ನು ಬೆಂಬಲಿಸಲು ಪಂಜಾಬ್ ರಾಜ್ಯ ಮುಖಂಡರು ವಿಫಲರಾಗಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ನಡೆದ ಚರ್ಚೆಯ ಬೆನ್ನಲ್ಲೇ ಸುನೀಲ್ ಜಾಖರ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News