ಧರ್ಮನಿಷ್ಟ ಮುಸ್ಲಿಮರಿಗೆ ಹಿಜಾಬ್ ಆರಾಧನೆಯ ಭಾಗ, ನ್ಯಾಯಾಧೀಶರು ಅದನ್ನು ಅಗತ್ಯವಿಲ್ಲ ಎನ್ನುವಂತಿಲ್ಲ: ಉವೈಸಿ
ಹೈದರಾಬಾದ್: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ತಾನು ಒಪ್ಪುವುದಿಲ್ಲ ಎಂದು ಎಐಎಮ್‌ಐಎಂ ಸಂಸದ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಉವೈಸಿ, ʼಹಿಜಾಬ್ ಕುರಿತಾದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ನಾನು ಒಪ್ಪುವುದಿಲ್ಲ. ತೀರ್ಪನ್ನು ಒಪ್ಪದಿರುವುದು ನನ್ನ ಹಕ್ಕು ಹಾಗೂ ಅರ್ಜಿದಾರರು (ತೀರ್ಪಿನ ವಿರುದ್ಧ) ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ನಾನು ಭಾವಿಸುತ್ತೇನೆʼ ಎಂದು ಅವರು ಹೇಳಿದ್ದಾರೆ.
ʼಧರ್ಮ, ಸಂಸ್ಕೃತಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿರುವುದರಿಂದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾತ್ರವಲ್ಲದೆ ಇತರ ಧಾರ್ಮಿಕ ಗುಂಪುಗಳ ಸಂಘಟನೆಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತವೆ ಎಂದು ನಾನು ಭಾವಿಸುತ್ತೇನೆʼ ಎಂದವರು ತಿಳಿಸಿದ್ದಾರೆ.
ʼಓರ್ವರಿಗೆ ಆಲೋಚನೆ, ಅಭಿವ್ಯಕ್ತಿ, ಧಾರ್ಮಿಕ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವಿದೆ ಎಂದು ಸಂವಿಧಾನದ ಪೀಠಿಕೆಯು ಹೇಳುತ್ತದೆ. ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ ಮತ್ತು ವಿಶ್ವಾಸವಾಗಿದ್ದರೆ, ನಾನು ಸೂಕ್ತವೆಂದು ಭಾವಿಸಿದಂತೆ ಅದನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಾಬ್ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ.ʼ
ʼಇದು ಅತ್ಯಗತ್ಯ ಧಾರ್ಮಿಕ ಅಭ್ಯಾಸ ಪರೀಕ್ಷೆಯನ್ನು ಪರಿಶೀಲಿಸುವ ಸಮಯ. ಒಬ್ಬ ಧರ್ಮನಿಷ್ಠ ವ್ಯಕ್ತಿಗೆ, ಎಲ್ಲವೂ ಅತ್ಯಗತ್ಯ ಅದೇ ವೇಳೆ ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ, ಜನಿವಾರ ಅತ್ಯಗತ್ಯ ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು (ಧಾರ್ಮಿಕ) ಅತ್ಯಗತ್ಯವನ್ನು ನಿರ್ಧರಿಸಬಹುದು ಎಂಬುದು ಅಸಂಬದ್ಧವಾಗಿದೆ.ʼ
ʼಅದೇ ಧರ್ಮದ ಇತರ ಜನರಿಗೆ ಕೂಡಾ ಯಾವುದು ಅಗತ್ಯ, ಯಾವುದು ಅಗತ್ಯವಲ್ಲ ಎಂದು ನಿರ್ಧರಿಸುವ ಹಕ್ಕು ಇಲ್ಲ. ಅದು ವ್ಯಕ್ತಿ ಮತ್ತು ದೇವನ ನಡುವೆ ಮಾತ್ರ ಇರುವಂತಹದ್ದು. (ಧಾರ್ಮಿಕ) ಆಚರಣೆಗಳು ಇತರರಿಗೆ ಹಾನಿಯಾದಾಗ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ಸರ್ಕಾರಕ್ಕೆ ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ತಲೆಗೆ ಹಿಜಾಬ್ ಧರಿಸುವುದು ಯಾರಿಗೂ ಹಾನಿ ಮಾಡುವುದಿಲ್ಲ.ʼ
ʼತಲೆವಸ್ತ್ರವನ್ನು ನಿಷೇಧಿಸುವುದು ಧರ್ಮನಿಷ್ಠ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿ ಮಾಡುತ್ತದೆ. ಏಕೆಂದರೆ ಇದು ಶಿಕ್ಷಣವನ್ನು ಪ್ರಡೆಯುವುದನ್ನು ತಡೆಯುತ್ತದೆ.ʼ
ʼವಸ್ತ್ರಸಂಹಿತೆಯು ಏಕರೂಪತೆಯನ್ನು ಖಚಿತಪಡಿಸುವುದು ಹೇಗೆ? ಯಾರು ಶ್ರೀಮಂತರ/ಬಡವರ ಮನೆಯಿಂದ ಬಂದವರೆಂದು ಮಕ್ಕಳು ತಿಳಿಯುವುದಿಲ್ಲವೇ? ಜಾತಿ ಸೂಚಕ ಹೆಸರುಗಳು ಅವರ ಹಿನ್ನೆಲೆಯನ್ನು ಸೂಚಿಸುವುದಿಲ್ಲವೇ?ʼ
ʼಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಲು ಸಮವಸ್ತ್ರ ಏನು ಕೊಡುಗೆ ನೀಡಿದೆ? ಜಾಗತಿಕವಾಗಿ ವೈವಿಧ್ಯತೆಯನ್ನು ಪ್ರತಿನಿಧಿಸಲು ಶಾಲೆ, ಪೊಲೀಸ್ ಮತ್ತು ಸೇನೆಯ ಸಮವಸ್ತ್ರಗಳಲ್ಲಿ ಸಮಂಜಸವಾದ ಅವಕಾಶಗಳನ್ನು ನೀಡಲಾಗಿದೆ.ʼ
ʼಐರ್ಲೆಂಡ್ ಸರ್ಕಾರವು ಹಿಜಾಬ್ ಮತ್ತು ಸಿಖ್ ಪೇಟವನ್ನು ಅನುಮತಿಸಲು ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಾಯಿಸಿದಾಗ, ಮೋದಿ ಸರ್ಕಾರ ಅದನ್ನು ಸ್ವಾಗತಿಸಿತು. ಹಾಗಾದರೆ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ಎರಡು ಮಾನದಂಡಗಳೇಕೆ? ಸಮವಸ್ತ್ರದ ಬಣ್ಣಗಳ ಹಿಜಾಬ್ ಮತ್ತು ಪೇಟಗಳನ್ನು ಧರಿಸಲು ಅನುಮತಿಸಬಹುದು.ʼ
ʼಇದೆಲ್ಲದರ ಪರಿಣಾಮವೇನು? ಮೊದಲನೆಯದಾಗಿ, ಸರ್ಕಾರವು ಅಸ್ತಿತ್ವದಲ್ಲಿಲ್ಲದ ಸಮಸ್ಯೆಯನ್ನು ಸೃಷ್ಟಿಸಿತು. ಮಕ್ಕಳು ಹಿಜಾಬ್, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಲಾಯಿತು ಮತ್ತು ಕೇಸರಿ ಪೇಟಗಳೊಂದಿಗೆ ಪ್ರತಿಯಾಗಿ ಪ್ರತಿಭಟನೆಗಳನ್ನು ನಡೆಸಲಾಯಿತು.
ಕೇಸರಿ ಪೇಟಗಳು ಅಗತ್ಯವಾಗಿತ್ತೇ ಅಥವಾ ಕೇವಲ ಹಿಜಾಬ್‌ಗೆ ಪ್ರತಿಕ್ರಿಯೆಯಾಗಿತ್ತೇ?ʼ
ʼಮೂರನೆಯದಾಗಿ, ಸರ್ಕಾರಿ ಆದೇಶ ಮತ್ತು ಹೈಕೋರ್ಟ್ ಆದೇಶವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ. ಮಾಧ್ಯಮಗಳು, ಪೊಲೀಸರು ಮತ್ತು ಆಡಳಿತ ಮಂಡಳಿ ಹಿಜಾಬ್ ಧಾರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಿರುಕುಳ ನೀಡುವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಸಾಮೂಹಿಕ ಉಲ್ಲಂಘನೆಯಾಗಿದೆ.ʼ
ʼಕೊನೆಯದಾಗಿ, ಇದರರ್ಥ, ಒಂದು ಧರ್ಮವನ್ನು ಗುರಿಯಾಗಿಸಲಾಗಿದೆ ಮತ್ತು ಅದರ ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್ 15 ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಇದು ಅದೇ (ಆರ್ಟಿಕಲ್ 15 ರ) ಉಲ್ಲಂಘನೆಯಲ್ಲವೇ? ಸಂಕ್ಷಿಪ್ತವಾಗಿ ಹೈಕೋರ್ಟ್ ಆದೇಶವು ಮಕ್ಕಳನ್ನು ʼಶಿಕ್ಷಣ ಮತ್ತು ಅಲ್ಲಾಹನʼ ಆಜ್ಞೆಗಳ ನಡುವೆ ಆಯ್ಕೆ ಮಾಡುವಂತೆ ಒತ್ತಾಯಿಸಿದೆ.ʼ
ʼ (ನಮಾಜು, ಹಿಜಾಬ್, ಉಪವಾಸದೊಂದಿಗೆ) ಶಿಕ್ಷಣ ಪಡೆಯುವುದು ಅಲ್ಲಾಹನ ಆಜ್ಞೆಯಾಗಿದೆ. ಆದರೆ, ಈಗ ಸರ್ಕಾರ ಇವುಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸಿದೆ. ಇದುವರೆಗೂ ನ್ಯಾಯಾಂಗವು ಮಸೀದಿ, ದಾಡಿ ಹಾಗೂ ಈಗ ಹಿಜಾಬನ್ನು ಕೂಡಾ ಅತ್ಯಗತ್ಯವಲ್ಲವೆಂದು ತೀರ್ಪು ನೀಡಿದೆ. ನಂಬಿಕೆಗಳನ್ನು ಮುಕ್ತವಾಗಿ ಆಚರಿಸುವುದರಲ್ಲಿ ಇನ್ನು ಏನು ಉಳಿದಿದೆ?ʼ
ʼಹಿಜಾಬ್ ಧರಿಸಿರುವ ಮಹಿಳೆಯರಿಗೆ ನೀಡುವ ಕಿರುಕುಳವನ್ನು ಕಾನೂನುಬದ್ಧಗೊಳಿಸಲು ಈ ತೀರ್ಪು ಬಳಸಲ್ಪಡುವುದಿಲ್ಲ ಎಂದು ನಾನು ಆಶಿಸುತ್ತೇನೆ. ಒಬ್ಬರು ಆಶಿಸಬಹುದು ಮಾತ್ರ, ಆದರೆ, ಬ್ಯಾಂಕ್, ಆಸ್ಪತ್ರೆ, ಸಾರ್ವಜನಿಕ ಸಾರಿಗೆಗಳಲ್ಲಿ ಇದು ಸಂಭವಿಸಿದಾಗ ನಿರಾಶೆಯಾಗಬಹುದುʼ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
1. I disagree with Karnataka High Court's judgement on #hijab. It’s my right to disagree with the judgement & I hope that petitioners appeal before SC
— Asaduddin Owaisi (@asadowaisi) March 15, 2022
2. I also hope that not only @AIMPLB_Official but also organisations of other religious groups appeal this judgement...