ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ನೋವು ತಂದಿದೆ: ನ್ಯಾಯವಾದಿ ಸೈಯ್ಯದ್ ಇಮ್ರಾನ್
ಭಟ್ಕಳ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯದ ಉಚ್ಚನ್ಯಾಯಾಲಯ ನೀಡಿದ ತೀರ್ಪು ನಮಗೆ ನೋವು ತಂದಿದೆ ಎಂದು ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಮುಖಂಡ, ನ್ಯಾಯವಾದಿ ಸೈಯ್ಯದ್ ಇಮ್ರಾನ್ ಲಂಕಾ ಹೇಳಿದ್ದಾರೆ.
ಅವರು ಮಂಗಳವಾರ ತಂಝೀಮ್ ಕಾರ್ಯಾಲಯದಲ್ಲಿ ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹಿಜಾಬ್ ಸಂಬಂಧ ಹೈಕೋರ್ಟ್ ನೀಡಿದ ತೀರ್ಪನ್ನು ಮುಸ್ಲಿಮ್ ಸಮುದಾಯ ಸ್ವೀಕರಿಸುವುದಿಲ್ಲ. ಕೋರ್ಟಿನಲ್ಲಿ ಅರ್ಜಿದಾರರ ಪರ ವಕೀಲರು ಸಮರ್ಪಕವಾಗಿ ವಾದ ಮಾಡಿದ್ದರು. ಅದನ್ನು ಗ್ರಹಿಸುವಲ್ಲಿ ಕೋರ್ಟ್ ವಿಫಲವಾಗಿದ್ದು, ಆ ಕಾರಣ ಹಿಜಾಬ್ ಇಸ್ಲಾಮ್ ಧರ್ಮದಲ್ಲಿ ಅಗತ್ಯವಿಲ್ಲ ಎಂಬಂತಹ ತೀರ್ಪನ್ನು ನೀಡಿದೆ ಎಂದರು.
ಪವಿತ್ರ ಕುರ ಆನ್ ನಲ್ಲಿ ಹಿಜಾಬ್ ಅವಶ್ಯಕತೆಯಿಲ್ಲ ಎಂದು ಹೇಳಿದೆ ಎಂಬ ಅಂಶವನ್ನು ಕೋರ್ಟ್ ಹೇಳಿದೆ. ಆದರೆ ಕುರ್ ಆನ್ ನೀಡಿದ ಎಲ್ಲ ಆದೇಶಗಳು ಮುಸ್ಲಿಮರಿಗೆ ಅಗತ್ಯವಾಗಿದೆ ಎಂದು ನಾವು ನಂಬಿದ್ದೇವೆ. ಸಂವಿಧಾನದ ಅರ್ಟಿಕಲ್ 25 ಮತ್ತು 26 ನಮಗೆ ಸಂಪೂರ್ಣವಾದ ಅಧಿಕಾರ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದು ಸಂವಿಧಾನದ ಆರ್ಟಿಕಲ್ 25 ಮತ್ತು 26ರ ವಿರುದ್ಧ ಕೋರ್ಟು ತೀರ್ಪು ಬಂದಿದೆ ಎಂದರು.
ಈ ತೀರ್ಪನ್ನು ಸುಪ್ರೀಮ್ ಕೋರ್ಟನಲ್ಲಿ ಚಾಲೆಂಜ್ ಮಾಡುವುದಾಗಿ ತಿಳಿಸಿದ ಅವರು ಇದಕ್ಕಾಗಿ ಸಂತೃಸ್ತ ವಿದ್ಯಾರ್ಥಿನಿಯರ ಪರ ಸಹನೂಭೂತಿಯನ್ನು ವ್ಯಕ್ತಪಡಿಸಿದ್ದು ಅವರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು. ಇಂದಿನ ತೀರ್ಪು ವಿದ್ಯಾರ್ಥಿನಿಯ ಹಾಗೂ ದೇಶದ ಭವಿಷ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಬಲ್ಲದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯಾ ಮಸೀದಿ ಚಿನ್ನದಪಳ್ಳಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಖತೀಬಿ, ಇಸ್ಲಾಮ್ ಧರ್ಮದ ಕುರಿತಂತೆ ಅದರ ಅಧಿಕೃತ ವಿದ್ವಾಂಸರಿಂದ ಮಾತ್ರ ಕಲಿಯಬಹುದಾಗಿದ್ದು ಬೇರೆ ಯಾರು ಕೂಡ ಕುರ್ ಆನ್ ಮತ್ತು ಇಸ್ಲಾಮ್ ಧರ್ಮವನ್ನು ವ್ಯಾಖ್ಯಾನಿಸುವಂತಿಲ್ಲ. ವಿಷಯ ಪರಿಣಿತ ಮಾತ್ರ ಆ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಮಾತನಾಡಬೇಕಾಗುತ್ತದೆ ಎಂದ ಅವರು ಹಿಜಾಬ್ ಕುರಿತಂತೆ ಪವಿತ್ರ ಕುರ್ ಆನ್ ಯಾವ ಯಾವ ಅದ್ಯಾಯಗಳಲ್ಲಿ ಆದೇಶ ನೀಡಿದೆ ಎಂಬುದನ್ನು ಉಲ್ಲೇಖಿಸುತ್ತ ಹಿಜಾಬ್ ಇಸ್ಲಾಮ್ ಧರ್ಮದ ಅವಿಭಾಜ್ಯ ಅಂಗ ಮಾತ್ರವಲ್ಲ ಇದು ಹೆಣ್ಣುಮಕ್ಕಳ ರಕ್ಷಾವಚವಾಗಿದೆ ಎಂದರು.
ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೆಝ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಮುಖಂಡರಾದ ಡಾ. ಹನೀಫ್ ಶಬಾಬ್, ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಮತ್ತಿತರರು ಉಪಸ್ತಿತರಿದ್ದರು.
ಸ್ವಯಂ ಪ್ರೇರಿತ ಭಟ್ಕಳ ಬಂದ್?: ಹಿಜಾಬ್ ವಿರುದ್ಧ ತೀರ್ಪು ಬರುತ್ತಿದ್ದಂತೆ ಮಂಗಳವಾರ ಕೆಲ ಯುವಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದು, ಇತರರಿಗೂ ಬಂದ್ ಮಾಡುವಂತೆ ಮನವೊಲಿಸುತ್ತಿದ್ದಾಗ ಪರಸ್ಪರ ಮಾತಿನ ಚಕಮಕಿ ಉಂಟಾಗಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ನಂತರ ಪೊಲೀಸರ ಮಧ್ಯ ಪ್ರವೇಶದಿಂದಾಗಿ ವಾತಾವರಣ ತಿಳಿಗೊಂಡಿತು ಎಂದು ತಿಳಿದು ಬಂದಿದೆ.
ತಂಝೀಮ್ ಪದಾಧಿಕಾರಿಗಳಿಂದ ಸ್ವಯಂ ಪ್ರೇರಿತ ಬಂದ್: ತಂಝೀಮ್ ಸಂಸ್ಥೆಯ ನೂರಕ್ಕೂ ಅಧಿಕ ಸದಸ್ಯರಿದ್ದು ಅವರು ಬುಧವಾರ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವುದಾಗಿ ತಂಝೀಮ್ ಮುಖಂಡರು ತಿಳಿಸಿದ್ದಾರೆ.
ಹೈಕೋರ್ಟಿನ ತೀರ್ಪಿನಿಂದಾಗಿ ಯಾರಿಗಾದರೂ ನೋವು ದುಖಃ ಉಂಟಾಗಿದ್ದರೆ ಅವರು ಕೂಡ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ನೀಡಬೇಕೆಂದು ನ್ಯಾಯಾವಾದಿ ಇಮ್ರಾನ್ ಲಂಕಾ ತಿಳಿಸಿದ್ದಾರೆ. ನಾವು ಯಾರಿಗೂ ಒತ್ತಾಯ ಮಾಡುವುದಿಲ್ಲ. ಬದಲಾಗಿ ಇದು ವಯಕ್ತಿಕ ವಿಚಾರವಾಗಿದೆ ಎಂದರು.