ಲಖಿಂಪುರಖೇರಿ ಹಿಂಸಾಚಾರ : ಆಶಿಷ್ ಮಿಶ್ರಾ ಜಾಮೀನು ಪ್ರಶ್ನಿಸಿದ ಮನವಿಯ ವಿಚಾರಣೆಗೆ ಸುಪ್ರೀಂನಿಂದ ಪೀಠ ಸ್ಥಾಪನೆ

Update: 2022-03-15 17:33 GMT
photo pti

ಹೊಸದಿಲ್ಲಿ, ಮಾ. 15: ಲಖಿಂಪುರಖೇರಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಆಶಿಷ್ ಮಿಶ್ರಾ ಅವರಿಗೆ ನೀಡಿರುವ ಜಾಮೀನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಗೆ ಪೀಠವೊಂದನ್ನು ಸ್ಥಾಪಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ‌

ಈಗ ಹಿಂಪಡೆಯಲಾಗಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಕ್ಟೋಬರ್ 3ರಂದು ನಡೆದ ಪ್ರತಿಭಟನೆ ಸಂದರ್ಭ ಆಶಿಷ್ ಮಿಶ್ರಾ ಕಾರು ಕಾರು ಢಿಕ್ಕಿ ಹೊಡೆಸಿ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತ ಸೇರಿದಂತೆ 8 ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. 

ಫೆಬ್ರವರಿ 10ರಂದು ಆಶಿಷ್ ಮಿಶ್ರಾಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಆದೇಶ ಪ್ರಶ್ನಿಸಿ ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬ ಸುಪ್ರೀಂ ಕೋರ್ಟ್ನಲ್ಲಿ ಕಳೆದ ತಿಂಗಳು ಮನವಿ ಸಲ್ಲಿಸಿತ್ತು. ಕೆಲವು ರೈತರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ಪ್ರಕರಣದ ಪ್ರಧಾನ ಸಾಕ್ಷಿ ಮೇಲೆ ಮಾರ್ಚ್ 11ರ ಹಿಂದಿನ ರಾತ್ರಿ ದಾಳಿ ನಡೆದಿದೆ ಎಂದು ತಿಳಿಸಿದರು. 

ಇತ್ತೀಚೆಗೆ ಪೂರ್ಣಗೊಂಡ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಲಖಿಂಪುರಖೇರಿ ಜಿಲ್ಲೆಯ ಎಲ್ಲ 8 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿರುವುದನ್ನು ಉಲ್ಲೇಖಿಸಿದ ಭೂಷಣ್, ಪ್ರಧಾನ ಸಾಕ್ಷಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಕೂಡ ಹೇಳಿದರು. ಸಾಕ್ಷಿ ಮೇಲೆ ದಾಳಿ ನಡೆಸಿದ ಹಾಗೂ ಬೆದರಿಕೆ ಒಡ್ಡಿದ ದುಷ್ಕರ್ಮಿಗಳು, ‘‘ಈಗ ಬಿಜೆಪಿ ಜಯ ಗಳಿಸಿದೆ. ಅದು ನಿನ್ನನ್ನು ನೋಡಿಕೊಳ್ಳುತ್ತದೆ’’ ಎಂದು ಹೇಳಿದ್ದರು ಎಂದು ಪ್ರತಿಪಾದಿಸಿದ್ದಾರೆ. 

ಅಲಹಾಬಾದ್ ಉಚ್ಚ ನ್ಯಾಯಾಲಯ ಆಶಿಷ್ ಮಿಶ್ರಾಗೆ ಜಾಮೀನು ನೀಡಿದ ಬಳಿಕ ಇತರ ಸಹ ಆರೋಪಿಗಳು ಕೂಡ ಜಾಮೀನು ಕೋರಿ ಮನವಿ ಸಲ್ಲಿಸುತ್ತಿದ್ದಾರೆ ಎಂದು ಭೂಷಣ್ ತಿಳಿಸಿದ್ದಾರೆ. ಅನಂತರ ಅವರು ಆಶಿಷ್ ಮಿಶ್ರಾಗೆ ನೀಡಿರುವ ಜಾಮೀನು ವಿರುದ್ಧ ಸಲ್ಲಿಸಲಾಗಿರುವ ಮನವಿಯ ತುರ್ತು ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News