ಬಾಂಗ್ಲಾ: ಅತ್ಯಾಚಾರ ಸಂತ್ರಸ್ತರ ಅನೈತಿಕ ನಡತೆಯ ಬಗ್ಗೆ ಪ್ರಶ್ನಿಸುವ ವಿಚಾರಣೆಗೆ ನಿಷೇಧ

Update: 2022-03-15 17:50 GMT

ಸಾಂದರ್ಭಿಕ ಚಿತ್ರ
 

ಢಾಕ, ಮಾ.15: ಬಾಂಗ್ಲಾದೇಶದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಸಂದರ್ಭ ಸಂತ್ರಸ್ತರ ಅನೈತಿಕ ನಡತೆಯ ಬಗ್ಗೆ ಪ್ರಶ್ನಿಸುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

     
ಈ ಅವಮಾನಕಾರಿ ರೀತಿಯ ವಿಚಾರಣೆಯನ್ನು ನಿಷೇಧಿಸಬೇಕೆಂದು ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ಹೋರಾಟ ಸಂಘಟನೆಗಳು ಸುದೀರ್ಘ ಸಮಯದಿಂದ ಅಭಿಯಾನ ಆರಂಭಿಸಿದ್ದವು. ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದ ಬ್ರಿಟಿಷ್ ವಸಾಹತುಶಾಹಿ ಯುಗದ ಪುರಾವೆ ಕಾನೂನಿನಲ್ಲಿ , ಪೊಲೀಸ್ ವಿಚಾರಣೆ, ನ್ಯಾಯಾಲಯದ ತನಿಖೆ ಸಂದರ್ಭ ಅತ್ಯಾಚಾರ ಸಂತ್ರಸ್ತರ ನಡತೆಯನ್ನು ಪ್ರಶ್ನಿಸುವುದಕ್ಕೆ ಅವಕಾಶವಿತ್ತು. ಸಂತ್ರಸ್ತೆ ತನ್ನ ನೈತಿಕ ನಡತೆ ಬಗ್ಗೆ ಪುರಾವೆ ಒದಗಿಸಬೇಕಿತ್ತು. ಈ ಅಮಾನವೀಯ ಕಾನೂನನ್ನು ರದ್ದುಗೊಳಿಸುವಂತೆ ಮಹಿಳಾ ಹೋರಾಟಗಾರರು ದಶಕಗಳಿಂದ ಆಗ್ರಹಿಸುತ್ತಿದ್ದರು. ಕಾಯ್ದೆಯನ್ನು ಪ್ರಶ್ನಿಸಿ ಕಳೆದ ವರ್ಷ ಹಕ್ಕು ಹೋರಾಟಗಾರರ ಸಂಘಟನೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು.
 
ಇದೀಗ ಕಾಯ್ದೆಯಲ್ಲಿನ ಪುರಾವೆ ಅಂಶವನ್ನು ರದ್ದುಗೊಳಿಸಲು ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸಂಪುಟ ಸಭೆ ನಿರ್ಧರಿಸಿದ್ದು ಇದಕ್ಕೆ ಶೀಘ್ರವೇ ಸಂಸತ್ತಿನ ಅನುಮೋದನೆ ಪಡೆಯಲಾಗುವುದು. ಮಹಿಳಾ ಸಶಕ್ತೀಕರಣದತ್ತ ಇದು ಮತ್ತೊಂದು ಹೆಜ್ಜೆಯಾಗಿದೆ ಎಂದು ಬಾಂಗ್ಲಾದೇಶದ ನ್ಯಾಯ ಇಲಾಖೆಯ ಸಚಿವ ಅನಿಸುಲ್ ಹಖ್ ಹೇಳಿದ್ದಾರೆ.
 
ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದಲ್ಲಿ ಅತ್ಯಾಚಾರ ಪ್ರಕರಣಗಳು ವಿಪರೀತ ಹೆಚ್ಚಿದ್ದು ಇದಕ್ಕೆ ಕಾಯ್ದೆಯಲ್ಲಿನ ಲೋಪದೋಷಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದವರು ನಿರ್ಭಯದಿಂದ ಇರುವ ಪರಿಸ್ಥಿತಿ ನೆಲೆಸಿರುವುದು ಕಾರಣ ಎಂದು ಮಾನವಹಕ್ಕು ಸಂಘಟನೆಗಳು ಟೀಕಿಸಿವೆ. ನಡತೆಯ ಬಗ್ಗೆ ಪುರಾವೆ ಒದಗಿಸುವಂತೆ ಸೂಚಿಸುವುದು, ಈ ಕುರಿತ ಪ್ರಶ್ನೆ ಕೇಳುವುದು ಸಂತ್ರಸ್ತೆಯ ನೈತಿಕತೆಯ ಮೇಲೆ ಸಂಶಯ ಮೂಡುವಂತೆ ಮಾಡುತ್ತಿದೆ ಎಂದು ಕಳೆದ ವರ್ಷ ಬಾಂಗ್ಲಾದೇಶದ ಕಾನೂನು ನೆರವು ಮತ್ತು ಸಲಹಾ ಕೇಂದ್ರ ಟೀಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News