ಮಾಸ್ಕೊದಿಂದ ಸ್ಥಳಾಂತರಗೊಂಡ ವಿಶ್ವ ಚೆಸ್ ಒಲಿಂಪಿಯಾಡ್ ಚೆನ್ನೈಗೆ

Update: 2022-03-16 01:45 GMT

ಚೆನ್ನೈ: 44ನೇ ವಿಶ್ವ ಚೆಸ್ ಒಲಿಂಪಿಯಾಡ್ ಈ ವರ್ಷದ ಕೊನೆಯಲ್ಲಿ ಚೆನ್ನೈನಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಪಂದ್ಯಾವಳಿ ರಷ್ಯಾದಿಂದ ಸ್ಥಳಾಂತರಗೊಂಡ ಬಳಿಕ ಭಾರತ ಕಳೆದ ತಿಂಗಳು ಕೂಟ ಆಯೋಜಿಸುವ ಇರಾದೆ ವ್ಯಕ್ತಪಡಿಸಿತ್ತು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿರುವ ಹಿನ್ನೆಲೆಯಲ್ಲಿ ಫಿಡೆ, ಮಾಸ್ಕೊದಲ್ಲಿ ಒಲಿಂಪಿಯಾಡ್ ನಡೆಸದಿರಲು ನಿರ್ಧರಿಸಿತ್ತು.

"ಚೆನ್ನೈ ಈ ಕೂಟಕ್ಕೆ ಆತಿಥ್ಯ ವಹಿಸುವುದು ದೃಢಪಟ್ಟಿದೆ" ಎಂದು ಎಐಸಿಎಫ್ ಕಾರ್ಯದರ್ಶಿ ಭರತ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಆದರೆ ಟೂರ್ನಿಯ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ಶುಕ್ರವಾರದ ವೇಳೆಗೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ದಿನಾಂಕ ಅಂತಿಮಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶುಕ್ರವಾರಕ್ಕೆ ಮುನ್ನ ಅದನ್ನು ಪ್ರಕಟಿಸಲಾಗುವುದು ಎಂದರು. ಇಂಥ ಬೃಹತ್ ಕೂಟವನ್ನು ಆಯೋಜಿಸಲು ಅಗತ್ಯವಾದ ಎಲ್ಲ ಹಣಕಾಸು ಹಿನ್ನೆಲೆ ಮತ್ತು ಅಗತ್ಯ ನೆರವು ಭಾರತದ ಬಳಿ ಇದೆ ಎಂದು ಚೌಹಾಣ್ ಫಿಡೆಗೆ ತಿಳಿಸಿದ್ದರು.

"ಕೂಟಕ್ಕೆ ಹೂಡಿಕೆ ಮಾಡಲು ಸಿದ್ಧವಿರುವ ಪ್ರಾಯೋಜಕರು ನಮ್ಮ ಬಳಿ ಇದ್ದಾರೆ. ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ನೆರವು ನೀಡಲು ವಿವಿಧ ಸಂಸ್ಥೆಗಳು ಇವೆ" ಎಂದು ಅವರು ಉಲ್ಲೇಖಿಸಿದ್ದರು.

ವಿಶ್ವನಾಥ್ ಆನಂದ್ ಮತ್ತು ಮ್ಯಾಗ್ನಸ್ ಕಾರ್ಲ್‍ಸನ್ ಅವರ ನಡುವೆ ಪ್ರಶಸ್ತಿ ಸೆಣೆಸಾಟ ನಡೆದ 2013ರ ಬಳಿಕ ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಚೆಸ್ ಕೂಟ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News