ಅಮೆರಿಕ ಅಧ್ಯಕ್ಷ ಜೋ ಬೈಡನ್, ಉನ್ನತ ಅಧಿಕಾರಿಗಳಿಗೆ ನಿಷೇಧ ಹೇರಿದ ರಷ್ಯಾ
ಮಾಸ್ಕೊ: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುದೇವ್ ಹಾಗೂ ಅಮೆರಿಕದ ಹಲವು ಮಂದಿ ಉನ್ನತ ಅಧಿಕಾರಿಗಳ ಮೇಲೆ ರಷ್ಯಾ ನಿಷೇಧ ಹೇರಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾಗೆ ಆರ್ಥಿಕ ನಿರ್ಬಂಧ ಹೇರಿದ್ದಕ್ಕೆ ಪ್ರತಿಯಾಗಿ ರಷ್ಯಾ ಈ ಕ್ರಮ ಕೈಗೊಂಡಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.
"ಈ ನಿಷೇಧ ಕ್ರಮ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೂ ಅನ್ವಯಿಸುತ್ತದೆ. ವಾಷಿಂಗ್ಟನ್ ಅನುಸರಿಸಿದ ನೀತಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಮಾಸ್ಕೊ ಹೇಳಿಕೆ ನೀಡಿದೆ.
ಮತ್ತೊಂದು ಪ್ರತ್ಯೇಕ ಹೇಳಿಕೆಯಲ್ಲಿ, ಕೆನಡಾ ಪ್ರಧಾನಿ ಟ್ರುಡೇವ್ ಮತ್ತು ಅವರ ಸಂಪುಟದ ಹಲವು ಮಂದಿ ಸಚಿವರು ಸೇರಿದಂತೆ 313 ಮಂದಿ ಕೆನಡಾ ಪ್ರಜೆಗಳ ಮೇಲೆ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗಿ ಲಾರ್ವೊವ್ ಅವರನ್ನು ಅಮೆರಿಕ ನಿಷೇಧಿಸಿದ್ದು ಹಾಗೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿತ್ತು.
ಈ ದಂಡನಾ ಕ್ರಮಗಳ ಖಚಿತ ಸ್ವರೂಪವನ್ನು ರಷ್ಯಾ ಸ್ಪಷ್ಟಪಡಿಸಿಲ್ಲವಾದರೂ, ವೈಯಕ್ತಿಕ ನಿರ್ಬಂಧ ಮತ್ತು ಸ್ಟಾಪ್ ಲಿಸ್ಟ್ ಗೆ ಇವರ ಹೆಸರು ಸೇರಿಸಲಾಗಿದೆ ಎಂದು ವಿವರಿಸಿದೆ.
ಅಮೆರಿಕದ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಮಾರ್ಕ್ ಮಿಲ್ಲೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವಾನ್, ಕೇಂದ್ರ ಗುಪ್ತಚರ ಏಜೆನ್ಸಿ ನಿರ್ದೇಶಕ ವಿಲಿಯಮ್ ಬನ್ರ್ಸ್ ಮತ್ತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಾಕಿ ಅವರ ಹೆಸರನ್ನೂ ನಿಷೇಧ ಪಟ್ಟಿ ಒಳಗೊಂಡಿದೆ.