×
Ad

ಹೌದು, 70 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ!

Update: 2022-03-16 09:13 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘70ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ’ ಎನ್ನುವ ಆರೋಪಗಳನ್ನು ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರು ಮಾಡುತ್ತಲೇ ಬಂದಿದ್ದಾರೆ. ಇದು ಅಕ್ಷರಶಃ ನಿಜ. ಬರೇ ಏಳು ವರ್ಷ ಆಡಳಿತ ನಡೆಸಿ ಬಿಜೆಪಿ ಎನ್ನುವ ಪಕ್ಷ ಇಡೀ ವಿಶ್ವದಲ್ಲೇ ಅತಿ ಶ್ರೀಮಂತ ಪಕ್ಷವಾಗಿ ಘೋಷಿತವಾಗಿದೆ. ಬರೇ ಏಳು ವರ್ಷಗಳಲ್ಲಿ ನೂರಾರು ಸಾಮಾಜಿಕ ಸಂಘಟನೆಗಳನ್ನು ಇಲ್ಲವಾಗಿಸಿದೆ. ಪರಿಸರ ಪರವಾಗಿ ದುಡಿಯುತ್ತಿರುವ ಹತ್ತು ಹಲವು ಅಂತರ್‌ರಾಷ್ಟ್ರೀಯ ಸಂಘಟನೆಗಳನ್ನು ಮಟ್ಟ ಹಾಕಿದೆ. ಮಾನವ ಹಕ್ಕಿಗಾಗಿ ದುಡಿಯುತ್ತಿರುವ ನೂರಾರು ಜನರನ್ನು ಜೈಲಿಗೆ ತಳ್ಳಿದೆ. ಸರಕಾರದ ವಿರುದ್ಧ ಮಾತನಾಡಿದ ಹೆಸರಿನಲ್ಲಿ ನೂರಾರು ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಿದೆ. ಸ್ವಯಂ ಆಸಕ್ತಿಯಿಂದ ಯಾವ ಅಂಜಿಕೆಯೂ ಇಲ್ಲದೆ ಮೇಲ್‌ಜಾತಿಯ ‘ಶ್ರೀಮಂತ ಬಡವ’ರಿಗೆ ಶೇ. 10 ಮೀಸಲಾತಿ ನೀಡಿದೆ. ನ್ಯಾಯಾಲಯದಲ್ಲಿ ತನ್ನ ಮೂಗಿನ ನೇರಕ್ಕಿರುವ ನ್ಯಾಯಾಧೀಶರನ್ನು ನೇಮಿಸಿ ಅವರಿಂದ ತನಗೆ ಬೇಕಾದ ತೀರ್ಪುಗಳನ್ನು ಹೊರಡಿಸಿದೆ ಮತ್ತು ಅವರಿಗೆ ಉಡುಗೊರೆಯಾಗಿ ರಾಜ್ಯಸಭಾ ಸ್ಥಾನಗಳನ್ನು ನೀಡಿದೆ. ತನ್ನ ಪಕ್ಷದ ಪರವಾಗಿ ಹೋರಾಡಿ ಹುತಾತ್ಮರಾಗಿರುವ ‘ರೌಡಿ’ಗಳಿಗೆ ಸರಕಾರದ ವತಿಯಿಂದಲೇ ಪರಿಹಾರಗಳನ್ನು ಬಿಡುಗಡೆ ಮಾಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಎಲ್ಲ ಮಾಧ್ಯಮಗಳನ್ನು ಕೊಂಡು ಕೊಂಡು ತನ್ನ ಪರವಾಗಿ ಮಾತನಾಡಿಸುತ್ತಿದೆ. ಬರೇ ಏಳು ವರ್ಷಗಳಲ್ಲಿ ಬಿಜೆಪಿಗೆ ಇದೆಲ್ಲ ಸಾಧ್ಯವಾಗಿರುವಾಗ, ‘70 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ’ ಎನ್ನುವ ಬಿಜೆಪಿ ಮತ್ತು ಆರೆಸ್ಸೆಸ್ ಆರೋಪ ನಿಜವೇ ತಾನೆ.

ಕನಿಷ್ಠ ಬೆಳೆಯುತ್ತಿರುವ ಕೋಮುವಾದಿ ಶಕ್ತಿಗಳನ್ನು ತಡೆಯಲು ಕಾಂಗ್ರೆಸ್ ಏನನ್ನಾದರೂ ಮಾಡಿದ್ದರೆ ಇಂದು ಕಾಂಗ್ರೆಸ್‌ಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ? ಆರೆಸ್ಸೆಸ್‌ನ ಅಂತಿಮ ಉದ್ದೇಶವೇನು, ಬಿಜೆಪಿಗೂ ಅದಕ್ಕೂ ಇರುವ ಸಂಬಂಧವೇನು ಎನ್ನುವುದು ಬೆಳಕಿನಷ್ಟು ಸ್ಪಷ್ಟವಿದ್ದರೂ, ಆರೆಸ್ಸೆಸ್‌ನ್ನು ಒಂದು ಸಾಂಸ್ಕೃತಿಕ ಸಂಘಟನೆಯೆಂಬಂತೆ ಬೆಳೆಸಿ ಪೋಷಿಸಿದ್ದು ಯಾರು? ಇಂದು ಆರೆಸ್ಸೆಸ್ ದೇಶಾದ್ಯಂತ ಸಾವಿರಾರು ಶಾಖೆಗಳನ್ನು ತೆರೆದು, ಲಕ್ಷಾಂತರ ಕಾರ್ಯಕರ್ತರನ್ನು ಸೃಷ್ಟಿಸಿ, ಬೇರೆ ಬೇರೆ ಉಪಸಂಘಟನೆಗಳನ್ನು ತನ್ನದಾಗಿಸಿಕೊಂಡಿದೆ. ಇವೆಲ್ಲವೂ ಆದದ್ದು ಬಿಜೆಪಿಯ ಆಡಳಿತದಲ್ಲಿ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಆರೆಸ್ಸೆಸ್ ದೇಶಾದ್ಯಂತ ವಿಸ್ತರಿಸಿದ್ದು ಕಾಂಗ್ರೆಸ್ ಈ ದೇಶವನ್ನು ಆಳಿದ 70 ವರ್ಷಗಳಲ್ಲಿ. ಸಾಮಾಜಿಕ ಮತ್ತು ಮಾನವೀಯವಾಗಿ ದುಡಿಯುತ್ತಿದ್ದ ಸರಕಾರೇತರ ಸಂಸ್ಥೆಗಳನ್ನು ಬಗ್ಗು ಬಡಿಯಲು ಬಿಜೆಪಿಗೆ ಬರೇ ಏಳು ವರ್ಷಗಳಲ್ಲಿ ಸಾಧ್ಯವಾಗಿದ್ದರೆ, ಕಳೆದ 70 ವರ್ಷಗಳ ಆಡಳಿತದಲ್ಲಿ ದೇಶಕ್ಕೆ ಮತ್ತು ಸಂವಿಧಾನಕ್ಕೆ ಅಪಾಯಕಾರಿಯಾಗಿರುವ ಚಿಂತನೆಗಳನ್ನು ಹೊಂದಿರುವ ಆರೆಸ್ಸೆಸ್‌ನ್ನು ಬಗ್ಗು ಬಡಿಯುವುದಕ್ಕೆ ಕಾಂಗ್ರೆಸ್‌ಗೆ ಯಾಕೆ ಸಾಧ್ಯವಾಗಲಿಲ್ಲ? ಕನಿಷ್ಠ ಆರೆಸ್ಸೆಸ್ ಸಂಘಟನೆಗೆ ಬರುವ ಹಣದ ಮೂಲಗಳನ್ನು ತನಿಖೆ ನಡೆಸಿದ್ದರೂ ಇಂದು ಆರೆಸ್ಸೆಸ್ ಸಂಘಟನೆ ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಕಾಂಗ್ರೆಸ್ ಕಾಲದಲ್ಲಿ ಆರೆಸ್ಸೆಸ್‌ನ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎಷ್ಟು ಐಟಿ ದಾಳಿಗಳು ನಡೆದಿವೆ? ಆರೆಸ್ಸೆಸ್‌ಗೆ ಬರುವ ಹಣದ ಮೂಲವನ್ನು ಗುರುತಿಸಿ ಅದನ್ನು ತಡೆಯುವ ಪ್ರಯತ್ನವನ್ನು ಕಾಂಗ್ರೆಸ್ ತನ್ನ 70 ವರ್ಷಗಳಲ್ಲಿ ಯಾಕೆ ಮಾಡಲಿಲ್ಲ? ಎಲ್ಲ ದೇವಸ್ಥಾನಗಳಿಗೆ ಹಣ, ಅನುದಾನಗಳನ್ನು ನೀಡುತ್ತಾ ಬಂದರೂ ಅದನ್ನು ಮತವಾಗಿ ಪರಿವರ್ತಿಸುವಲ್ಲಿ ಆಸಕ್ತಿಯಿರಲಿಲ್ಲ. ಇದೇ ಸಂದರ್ಭದಲ್ಲಿ ಅಧಿಕಾರ ರಹಿತವಾಗಿದ್ದ ಬಿಜೆಪಿಯು ಆರೆಸ್ಸೆಸ್‌ನ ಸಹಾಯದಿಂದ ಎಲ್ಲ ದೇವಸ್ಥಾನಗಳನ್ನು ಪ್ರವೇಶಿಸಿತು. ಇಂದು ಧಾರ್ಮಿಕ ಕಾರ್ಯಕ್ರಮ ಮತ್ತು ಬಿಜೆಪಿಯ ರಾಜಕೀಯ ಕಾರ್ಯಕ್ರಮದ ನಡುವಿನ ಅಂತರ ಬಹಳ ತೆಲುವಾಗಿದೆ.

ದೇಶದ ಎಲ್ಲ ದುಸ್ಥಿತಿಗೂ ನೆಹರೂ ಕಾರಣ, ಕಾಂಗ್ರೆಸ್ ಕಾರಣ ಎನ್ನುವುದು ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಬಿತ್ತಿರುವುದೇ? ಕಾಂಗ್ರೆಸ್ 70 ವರ್ಷಗಳ ಕಾಲ ಆಡಳಿತದಲ್ಲಿರುವಾಗಲೇ ಅದನ್ನು ಜನಮನದಲ್ಲಿ ಬಿತ್ತುವಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಯಶಸ್ವಿಯಾಯಿತು. ಇಲ್ಲಿರುವ ಜಾತ್ಯತೀತ ವೌಲ್ಯಗಳನ್ನೆಲ್ಲ ಬರೇ ಏಳು ವರ್ಷಗಳಲ್ಲಿ ಬಿಜೆಪಿ ನಾಶ ಮಾಡಿರುವುದಲ್ಲ. ದೇಶಾದ್ಯಂತ, ನೆಹರೂ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಅಳಿಸಿ ಆ ಜಾಗದಲ್ಲಿ ಗೋಡ್ಸೆ, ಸಾವರ್ಕರ್, ಗೋಳ್ವಾಲ್ಕರ್ ಚಿಂತನೆಗಳನ್ನು ಬಿತ್ತಿರುವುದು ಕಾಂಗ್ರೆಸ್ 70 ವರ್ಷಗಳ ಕಾಲ ಈ ದೇಶವನ್ನು ಆಳುತ್ತಿರುವಾಗ. ಆಗ ಅದನ್ನು ತಡೆಯುವಲ್ಲಿ ಕಾಂಗ್ರೆಸ್ ಕೈಯಲ್ಲಿ ಅಧಿಕಾರವಿತ್ತು. ಪೊಲೀಸರಿದ್ದರು. ನ್ಯಾಯಾಲಯಗಳಿದ್ದವು. ಆದರೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದ ಮೇಲೆ ‘ ಕಾಂಗ್ರೆಸ್ 70 ವರ್ಷದಲ್ಲಿ ದೇಶಕ್ಕಾಗಿ ಏನು ಮಾಡಿತು?’ ಎಂದು ಆರೆಸ್ಸೆಸ್ ಕೇಳುವುದರಲ್ಲಿ ಯಾವ ತಪ್ಪಿದೆ?

ಯಾವುದೇ ಪ್ರಭುತ್ವದ ಸಹಾಯವೇ ಇಲ್ಲದೆ ಆರೆಸ್ಸೆಸ್‌ನಂತಹ ಒಂದು ಬೃಹತ್ ಸೈದ್ಧಾಂತಿಕ ಚಿಂತನೆಯುಳ್ಳ ಸಂಘಟನೆಯನ್ನು ದೇಶಾದ್ಯಂತ ವಿಸ್ತರಿಸಬಹುದು ಎಂದಾದರೆ, ಈ ದೇಶದ ಇತಿಹಾಸ, ಸ್ವಾತಂತ್ರ ಹೋರಾಟ, ದೇಶಪ್ರೇಮ, ಮಾನವೀಯ ವೌಲ್ಯಗಳ ತಳಹದಿಯಲ್ಲಿ ಜನರಲ್ಲಿ ಜಾತ್ಯತೀತ ತತ್ವಗಳನ್ನು ಹರಡುವ ಸಂಘಟನೆಯೊಂದನ್ನು ಬೆಳೆಸಲು 70 ವರ್ಷ ಆಳಿದ ಕಾಂಗ್ರೆಸ್‌ಗೆ ಯಾಕೆ ಸಾಧ್ಯವಾಗಲಿಲ್ಲ? ಕಾಂಗ್ರೆಸ್‌ನಲ್ಲೂ ‘ಭಾರತೀಯ ಸೇವಾ ದಳ’ ಎನ್ನುವುದೊಂದಿದೆ. ಅದು ಇದೆ ಎನ್ನುವುದು ಸ್ವತಃ ಕಾಂಗ್ರೆಸ್‌ನಲ್ಲಿರುವ ನಾಯಕರಿಗೂ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಏನೂ ದಕ್ಕದ ಕಾರ್ಯಕರ್ತರು ಕೊನೆಗೆ ‘ಸಾರ್, ಸೇವಾದಳದಲ್ಲಾದರೂ ಏನಾದರೂ ಕೊಡಿ’ ಎಂದು ಕೇಳುವುದಕ್ಕಾಗಿ ಅದು ಅಸ್ತಿತ್ವದಲ್ಲಿದೆ. ಸ್ವಾತಂತ್ರ ಸಿಕ್ಕಿದ ದಿನದಿಂದಲೇ ಈದೇಶದ ಗಾಂಧಿ, ಅಂಬೇಡ್ಕರ್, ನೆಹರೂ ಚಿಂತನೆಗಳನ್ನು ಅವರ ಸಾಧನೆಗಳನ್ನು ಜನಮನದಲ್ಲಿ ಉಳಿಸಿ ಬೆಳೆಸುವುದಕ್ಕಾಗಿ, ಜಾತ್ಯತೀತ ತತ್ವಗಳನ್ನು ಹರಡುವುದಕ್ಕಾಗಿ ಸೇವಾದಳವನ್ನು ಬೆಳೆಸಿದ್ದಿದ್ದರೆ ಇಂದು ಕಾಂಗ್ರೆಸ್‌ಗೆ ಈ ಸ್ಥಿತಿ ಖಂಡಿತ ಬರುತ್ತಿರಲಿಲ್ಲ. ದೇಶಾದ್ಯಂತ ಯುವ ಜನರನ್ನು ಈ ಸೇವಾದಳದ ಮೂಲಕ ತರಬೇತಿಗೊಳಿಸಿ ಅರ್ಪಿಸಿದ್ದಿದ್ದರೆ ಇಂದು ನಮ್ಮ ಪೊಲೀಸ್, ಸೇನೆ, ನ್ಯಾಯಾಲಯ, ಶಾಲಾ ಕಾಲೇಜು ಎಲ್ಲೆಂದರಲ್ಲಿ ದೇಶದ ಜಾತ್ಯತೀತ ವೌಲ್ಯಗಳನ್ನು ಎತ್ತಿ ಹಿಡಿಯುವ ಯೋಧರೇ ಕಾಣಿಸಿಕೊಳ್ಳುತ್ತಿದ್ದರು. ತಳಸ್ತರದ ಹುಡುಗರು ಕೇಸರಿ ಧರಿಸಿ ಕೈಯಲ್ಲಿ ತ್ರಿಶೂಲ ಹಿಡಿದು ಕ್ರಿಮಿನಲ್‌ಗಳಾಗಿ ಜೈಲು ಸೇರುವ ಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ. ವಿಪರ್ಯಾಸವೆಂದರೆ, ಅದೆಷ್ಟೋ ಕಾಂಗ್ರೆಸ್ ಮುಖಂಡರಿಗೇ ನೆಹರೂ ಮಾಡಿರುವ ಸಾಧನೆಗಳ ಬಗ್ಗೆ ಅರಿವಿಲ್ಲ. ಇಂದು ಕಾಂಗ್ರೆಸ್‌ನ ಸ್ಥಿತಿ ಹೇಗಿದೆಯೆಂದರೆ, ಚುನಾವಣೆ ಘೋಷಣೆಯಾದರೂ ಅದು ಪ್ರಚಾರ ಕಾರ್ಯಕ್ಕಿಳಿಯುವುದಿಲ್ಲ. ಅಭ್ಯರ್ಥಿಯ ಹೆಸರು ಘೋಷಣೆಯಾದ ಬಳಿಕವೇ ಚುನಾವಣಾ ಪ್ರಚಾರ ಆರಂಭವಾಗುತ್ತದೆ. ಬೂತ್ ಮಟ್ಟದವರೆಗೆ ಹಣ ಸೂಕ್ತ ಸಮಯದಲ್ಲಿ ತಲುಪಿದರೆ ಪ್ರಚಾರ ಪೂರ್ಣ ಗೊಳ್ಳುತ್ತದೆ. ಯಾಕೆಂದರೆ, ಕಾಂಗ್ರೆಸ್‌ನಲ್ಲಿ ಇಂದು ಜಾತ್ಯತೀತ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುವ ಕಾರ್ಯಕರ್ತರೇ ಇಲ್ಲ. ಅವರೆಲ್ಲರೂ ಹಣಕ್ಕಾಗಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು. ಆದರೆ ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಧರ್ಮದ ಹೆಸರಿನಲ್ಲಿ, ಸಂಸ್ಕೃತಿಯ ಹೆಸರಿನಲ್ಲಿ, ಹಿಂದೂ ಪುನರುತ್ಥಾನದ ಹೆಸರಿನಲ್ಲಿ ಚುನಾವಣೆ ಇರಲಿ, ಇಲ್ಲದೇ ಇರಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸುತ್ತಲೇ ಇರುತ್ತದೆ. ದ್ವೇಷ ರಾಜಕಾರಣ, ಕೋಮುಗಲಭೆ ಇವೆಲ್ಲವೂ ಬಿಜೆಪಿಯ ಪಾಲಿಗೆ ಬೋನಸ್. ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತರಿಗೆ ಸುರಿಯುವ ಹಣಕ್ಕಂತೂ ಲೆಕ್ಕವೇ ಇಲ್ಲ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲದೇ ಇದ್ದರೆ ಅದುವೇ ಅಚ್ಚರಿ ಎನ್ನುವಷ್ಟರ ಮಟ್ಟಿಗೆ ಆರೆಸ್ಸೆಸ್ ಮತ್ತು ಅದ ಸಹ ಪರಿವಾರಗಳು ಬದ್ಧತೆಯಿಂದ ಕೆಲಸ ಮಾಡುತ್ತವೆ. ಅಂತಹ ಸೈದ್ಧಾಂತಿಕ ಬದ್ಧತೆಯಿರುವ ಕಾರ್ಯಕರ್ತರ ಪಡೆ ಕಾಂಗ್ರೆಸ್‌ನ ಬಳಿ ಯಾಕೆ ಇಲ್ಲ? ಯಾಕೆಂದರೆ ‘70 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ’.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಮನದೆಳೆ