ಹಿಜಾಬ್ ತೀರ್ಪು ಹಿನ್ನೆಲೆ; ಭಟ್ಕಳದಲ್ಲಿ ಅಂಗಡಿ ಮುಂಗಟ್ಟು ಬಂದ್‌ ಗೆ ಕರೆ

Update: 2022-03-16 05:50 GMT

ಭಟ್ಕಳ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ನಮಗೆ ನೋವು ತಂದಿದೆ ಎಂದು ಭಟ್ಕಳದ ತಂಝೀಮ್ ಸಂಘಟನೆ ತಿಳಿಸಿದ್ದು, ಇಂದು ಅಂಗಡಿ ಮುಂಗಟ್ಟು ಬಂದ್‌ ಗೆ ಕರೆ ನೀಡಿದೆ.

ಹಿಜಾಬ್‌ ತೀರ್ಪು ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣದಲ್ಲಿ ನಿನ್ನೆ ಅಂಗಡಿ ಮುಂಗಟ್ಟುಗಳನ್ನ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದ ವರ್ತಕರು ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಭಟ್ಕಳ ಬಂದ್ ಮಾಡಲು ತಂಝೀಮ್ ಸಂಘಟನೆ ಕರೆ ನೀಡಿದ್ದು, ಹೈಕೋರ್ಟ್‌ ತೀರ್ಪು ವಿರೋಧಿಸಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಕರೆ ನೀಡಿದೆ.

ಬಂದ್ ಕರೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಮುಂಜಾಗ್ರತೆ ಕೈಗೊಂಡಿದ್ದಾರೆ.

ಜಿಲ್ಲೆಯಾದ್ಯಂತ ಮಾರ್ಚ್ 20ರ ವರೆಗೆ ನಿಷೇಧಾಜ್ಞೆ ಜಾರಿಯಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಮೆರವಣಿಗೆಗೆ ಅವಕಾಶವಿಲ್ಲ, ಶಾಂತಿ, ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News