ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ 35% ಇರುವುದರಿಂದ ಅವರು ಅಲ್ಪಸಂಖ್ಯಾತರಲ್ಲ: ಅಸ್ಸಾಂ ಸಿಎಂ ಹೇಳಿಕೆ

Update: 2022-03-16 11:37 GMT

ಗುವಹಾಟಿ: ಮುಸ್ಲಿಮರು ಅಸ್ಸಾಂನ ಒಟ್ಟು ಜನಸಂಖ್ಯೆಯ ಶೇ 35ರಷ್ಟಿರುವುದರಿಂದ ಅವರು ಅಲ್ಪಸಂಖ್ಯಾತರಾಗಲು ಸಾಧ್ಯವಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು "ಇಂದು ಮುಸ್ಲಿಂ ಸಮುದಾಯದ ಜನರು ವಿಪಕ್ಷ ನಾಯಕರಾಗಿದ್ದಾರೆ. ಶಾಸಕರಾಗಿದ್ದಾರೆ, ಸಮಾನ ಅವಕಾಶ ಪಡೆದಿದ್ದಾರೆ ಮತ್ತು ಅಧಿಕಾರ ಕೂಡ ಹೊಂದಿದ್ದಾರೆ" ಎಂದರು.

"ಅಧಿಕಾರದೊಂದಿಗೆ ಜವಾಬ್ದಾರಿಯೂ ಇದೆ ಹಾಗೂ ಇಲ್ಲಿನ ಅಲ್ಪಸಂಖ್ಯಾತರನ್ನು ರಕ್ಷಿಸುವ ಕರ್ತವ್ಯವೂ ಅವರಿಗಿದೆ. ಅಸ್ಸಾಮಿನ ಜನರು ಭಯದಲ್ಲಿದ್ದಾರೆ. ಅವರ ಸಂಸ್ಕೃತಿ ಮತ್ತು ನಾಗರಿಕತೆಯ ರಕ್ಷಣೆಯಾಗುವುದೇ ಎಂಬ ಭಯ ಅವರಲ್ಲಿದೆ. ಮುಸ್ಲಿಮರು ಸಂಸ್ಕಾರಿ ಸಂಸ್ಕೃತಿ, ಸತ್ತ್ರೀಯ ಸಂಸ್ಕೃತಿ ಬಗ್ಗೆ ಮಾತನಾಡಲಿ ಆಗ ಅಲ್ಲಿ ಸಾಮರಸ್ಯವಿರುತ್ತದೆ. ಏಳು ವರ್ಷಗಳ ಹಿಂದೆ ನಾವು ಅಲ್ಪಸಂಖ್ಯಾತರಾಗಿರಲಿಲ್ಲ ಆದರೆ ಈಗ ಆಗಿದ್ದೇವೆ" ಎಂದು ಅವರು ಹೇಳಿದರು.

"ಕಾಶ್ಮೀರಿ ಪಂಡಿತರಿಗಾದ ಸ್ಥಿತಿಯೇ ಅಸ್ಸಾಂ ಜನರಿಗಾಗಲಿದೆಯೇ ಎಂದು ಜನರು ಕೇಳುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ತೋರಿಸಿದಂತೆ ಹತ್ತು ವರ್ಷದ ನಂತರ ಅಸ್ಸಾಂ ಆಗಲಿದೆಯೇ ಎಂದು ಕೇಳುತ್ತಿದ್ದಾರೆ. ನಮ್ಮ ಭಯವನ್ನು ಹೋಗಲಾಡಿಸುವುದು ಮುಸ್ಲಿಮರ ಕರ್ತವ್ಯ. ಮುಸ್ಲಿಮರು ಬಹುಸಂಖ್ಯಾತಂತೆ ವರ್ತಿಸಬೇಕು ಇಲ್ಲಿ ಕಾಶ್ಮೀರ ಘಟನೆ ಪುನರಾವರ್ತನೆಯಾಗುವುದಿಲ್ಲವೆಂದು ಭರವಸೆ ನೀಡಬೇಕು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News