×
Ad

ಹೈಕೋರ್ಟ್ ತೀರ್ಪು; ಉಡುಪಿಯಲ್ಲಿ ಬಹುತೇಕ ಹಿಜಾಬ್‌ ಧಾರಿ ವಿದ್ಯಾರ್ಥಿನಿಯರು ತರಗತಿಗೆ ಗೈರು

Update: 2022-03-16 20:25 IST

ಉಡುಪಿ : ಹಿಜಾಬ್ ಕುರಿತು ಹೈಕೋರ್ಟ್ ತೀರ್ಪಿನ ಬಳಿಕ ಬುಧವಾರ ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳು ಆರಂಭ ಗೊಂಡಿದ್ದು, ಬಹುತೇಕ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ತರಗತಿಗೆ ಗೈರು ಹಾಜರಾಗಿದ್ದಾರೆ.

ಬೆಳಗ್ಗೆ ಜಿಲ್ಲೆಯ ವಿವಿಧ ಕಾಲೇಜುಗಳ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜು ಆವರಣದೊಳಗೆ ಬುರ್ಕಾ, ಹಿಜಾಬ್‌ನೊಂದಿಗೆ ಆಗಮಿಸಿ, ಬಳಿಕ ತರಗತಿಯೊಳಗೆ ಹಿಜಾಬ್ ತೆಗೆದಿರಿಸಿ ತೆರಳಿದರು. ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಆಗಮಿಸಿದ ಒಂಭತ್ತು ವಿದ್ಯಾರ್ಥಿನಿಯ ರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ, ಅವರೆಲ್ಲ ಮನೆಗೆ ವಾಪಾಸ್ಸಾದರು.

ಹಿಜಾಬ್ ಹಾಕದೆ ತರಗತಿ ಹೋಗಲು ಒಪ್ಪದ ಹೈಕೋರ್ಟ್ ಅರ್ಜಿದಾರ ರಾದ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ಹಾಗೂ ಉಡುಪಿ ಎಂಜಿಎಂ, ಅಜ್ಜರಕಾಡು ಜಿ.ಶಂಕರ್ ಸರಕಾರಿ ಪದವಿ ಕಾಲೇಜು, ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಹಲವು ವಿದ್ಯಾರ್ಥಿನಿಯರು ಗೈರು ಹಾಜ ರಾಗಿದ್ದಾರೆ.

ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ದ್ವಿತೀಯ ಪಿಯು ತರಗತಿ ಗಳಿಗೆ ಇಂದು ರಜೆ ಇದ್ದು, ಪ್ರಥಮ ಪಿಯುವಿನ ೧೬ ಮುಸ್ಲಿಮ್ ವಿದ್ಯಾರ್ಥಿ ನಿಯರ ಪೈಕಿ ಮೂವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾದರು. ಉಳಿದವರು ಕಾಲೇಜಿಗೆ ಆಗಮಿಸದೆ ಗೈರು ಹಾಜರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜು ಆವರಣದ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಪಿಯು ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಬುಧವಾರ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಾಂಶುಪಾಲರ ಜೊತೆ ಚರ್ಚಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಹೈಕೋರ್ಟ್ ತೀರ್ಪು ಸಂಬಂಧ ಒಂದು ದಿನದ ರಜೆಯ ಬಳಿಕ ಎಲ್ಲ ಶಾಲಾ ಕಾಲೇಜುಗಳು ಪುನಾರಂಭಗೊಂಡಿವೆ. ಸಾರ್ವಜನಿಕರು ಹೈಕೋರ್ಟ್ ತೀರ್ಪನ್ನು ಗೌರವಿಸಿ, ಅದರಂತೆ ನಡೆದು ಕೊಂಡು ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೀರ್ಪಿಗೆ ಸಂಬಂಧಿಸಿ ಯಾವುದೇ ಪ್ರತಿಭಟನೆ, ಸಂಭ್ರಮಾಚರಣೆ, ಮೆರವಣಿಗೆ, ಸಭೆ ಸಮಾರಂಭ ಗಳನ್ನು ನಡೆಸದಂತೆ ನಿರ್ಬಂದ ವಿಧಿಸಲಾಗಿದೆ. ಅದೇ ರೀತಿ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ರಂತೆ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಹಾಜರಿದ್ದರು.

‘ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಆವರಣದಲ್ಲಿ ಶಾಂತಿಯ ವಾತಾವರಣ ಕಂಡುಬಂದಿದೆ. ಹೈಕೋರ್ಟ್ ತೀರ್ಪು ಪಾಲಿಸುವ ನಿಟ್ಟಿನಲ್ಲಿ ನಾನು, ಎಸ್ಪಿ, ತಹಶೀಲ್ದಾರ್ ಸೇರಿದಂತೆ ಇತರ ಅಧಿಕಾರಿಗಳು ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಾಂಶುಪಾಲರ ಜೊತೆ ಚರ್ಚೆ ಮಾಡಿದ್ದೇವೆ’
-ಕೂರ್ಮಾರಾವ್, ಜಿಲ್ಲಾಧಿಕಾರಿ ಉಡುಪಿ

ʼʼಕಾಲೇಜಿನ ೬೦೦ ವಿದ್ಯಾರ್ಥಿನಿಯರ ಪೈಕಿ ಇಂದು ೫೦ ಮಂದಿ ತರಗತಿಗೆ ಗೈರು ಹಾಜರಾಗಿದ್ದಾರೆ. ಇದರಲ್ಲಿ ೧೫ ಮಂದಿ ಮುಸ್ಲಿಮ್ ವಿದ್ಯಾರ್ಥಿನಿಯರು ಇದ್ದಾರೆ. ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ಆರು ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ. ಹಿಂದೆ ತರಗತಿ ಬಾರದ ವಿದ್ಯಾರ್ಥಿನಿಯರು ಕೂಡ ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾರೆ. ಉಳಿದಂತೆ ಕಾಲೇಜಿನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ.
-ರುದ್ರೇಗೌಡ, ಪ್ರಾಂಶುಪಾಲರು, ಸರಕಾರಿ ಬಾಲಕಿಯರ ಕಾಲೇಜು, ಉಡುಪಿ

ಹೈಕೋರ್ಟ್ ಮಧ್ಯಂತರ ಆದೇಶವನ್ನು ಅಪಾರ್ಥ ಮಾಡಿಕೊಂಡು ಪದವಿ ಕಾಲೇಜಿನಲ್ಲಿ ಶಿರವಸ್ತ್ರ ಧರಿಸಲು ಅವಕಾಶ ನೀಡದಿರುವುದರಿಂದ ನನ್ನ ಮಗಳು ಕಾಲೇಜಿನಿಂದ ದೂರ ಉಳಿದು ಮನೆಯಲ್ಲಿಯೇ ಇರುವಂತಾಯಿತು. ಆರಂಭ ದಲ್ಲಿ ಶಿರವಸ್ತ್ರ ಧರಿಸಲು ಅವಕಾಶ ಇರುವುದನ್ನು ಖಾತ್ರಿ ಪಡಿಸಿಕೊಂಡೆ ನನ್ನ ಮಗಳನ್ನು ಕಾಲೇಜಿಗೆ ಸೇರಿಸಿದೆ. ಈಗ ಶಿರವಸ್ತ್ರ ಧರಿಸುವಂತ್ತಿಲ್ಲ ಹೇಳಲಾಗುತ್ತಿದೆ. ಶಿರವಸ್ತ್ರ ಧರಿಸಿ ಕಾಲೇಜಿಗೆ ಹೋಗುತ್ತಿದ್ದ ನನ್ನ ಮಗಳು, ಈಗ ಶಿರವಸ್ತ್ರ ಇಲ್ಲದೆ ಕಾಲೇಜಿಗೆ ಹೋಗಲು ಕೇಳುತ್ತಿಲ್ಲ. ನನ್ನ ಮಗಳನ್ನು ವಕೀಲೆಯನ್ನಾಗಿ ಮಾಡ ಬೇಕೆಂಬ ಗುರಿಯೊಂದಿಗೆ ಉನ್ನತ ಶಿಕ್ಷಣ ನೀಡುತ್ತಿದ್ದೇನೆ. ಈಗ ನನ್ನ ಮಗಳು ವಿದ್ಯಾಭ್ಯಾಸದಿಂದ ವಂಚಿತಳಾಗಿದ್ದಾಳೆ. ಇದಕ್ಕೆ ಯಾರು ಹೊಣೆ.
-ಮುಹಮ್ಮದ್ ಹನೀಫ್ ಕರಂಬಳ್ಳಿ, ಪೋಷಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News