×
Ad

ಯೆಮನ್ ನಲ್ಲಿ ಆಹಾರದ ಬಿಕ್ಕಟ್ಟು ತೀವ್ರ: ವಿಶ್ವಸಂಸ್ಥೆ ಅಧಿಕಾರಿಗಳ ಹೇಳಿಕೆ

Update: 2022-03-16 23:18 IST

ನ್ಯೂಯಾರ್ಕ್, ಮಾ.16: ಯೆಮನ್ನಲ್ಲಿ ಆಹಾರದ ಬಿಕ್ಕಟ್ಟು ತೀವ್ರಗೊಂಡಿದ್ದು ಯೆಮನ್ ನ 75% ಜನತೆ ಆಹಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ತೀವ್ರ ಆಹಾರದ ಕೊರತೆ ಎದುರಾಗಿರುವ ಯೆಮನ್ಗೆ 2022ರಲ್ಲಿ 4.3 ಬಿಲಿಯನ್ ಡಾಲರ್ ನೆರವಿನ ಅಗತ್ಯವಿದ್ದು ಈ ನೆರವು ಲಭಿಸಿದರೆ 19 ಮಿಲಿಯನ್ ಜನ ಉಪವಾಸ ಬೀಳುವುದನ್ನು ತಪ್ಪಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಯುದ್ಧದಿಂದ ಜರ್ಝರಿತವಾಗಿರುವ ಯೆಮನ್ ಗೆ ಆರ್ಥಿಕ ನೆರವು ಸಂಗ್ರಹಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳುವ ದೇಶಗಳು ಈ ವಿಷಯವನ್ನು ಗಮನಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈಗ ವಿಶ್ವಸಂಸ್ಥೆಯ ನೆರವಿನ ನಿಧಿ ಬರಿದಾಗುತ್ತಿದೆ ಮತ್ತು ಹಣದ ಕೊರತೆಯಿಂದ ಯೆಮನ್ನಲ್ಲಿ ಹಲವು ಸಮಿತಿಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಆಹಾರದ ನೆರವಿನ ಯೋಜನೆ, ವಸತಿ ಒದಗಿಸುವ ಯೋಜನೆಗಳನ್ನು ಪುನರಾರಂಭಿಸುವ ಮೂಲಕ ‘ನಿಮ್ಮನ್ನು ಮರೆತಿಲ್ಲ’  ಎಂಬ ಸಂದೇಶವನ್ನು ಯೆಮನ್ ಪ್ರಜೆಗಳಿಗೆ ರವಾನಿಸಬೇಕಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಉಪ ಮಹಾ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್ ಮಂಗಳವಾರ ಹೇಳಿದ್ದಾರೆ. 

ಯೆಮನ್ ನ ಆಹಾರದ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವ ಅಪಾಯವಿದೆ. ಯಾಕೆಂದರೆ ಯೆಮನ್ಗೆ ಸರಬರಾಜಾಗುವ ಗೋಧಿಯಲ್ಲಿ 40%ದಷ್ಟು ಉಕ್ರೇನ್ನಿಂದ ಬರುತ್ತಿದ್ದು ಈ ಪೂರೈಕೆ ಸ್ಥಗಿತಗೊಳ್ಳಬಹುದು. ಉಕ್ರೇನ್ ಹಲವು ದೇಶಗಳಿಗೆ ಆಹಾರ ಒದಗಿಸುವ ಆಹಾರಕಣಜವಾಗಿದೆ. ಆ ದೇಶದಿಂದ ಆಹಾರದ ಪೂರೈಕೆ ನಿರಂತರವಾಗಿ ಮುಂದುವರಿಯಬೇಕಿದೆ ಎಂದು ಗ್ರಿಫಿತ್ಸ್ ಹೇಳಿದ್ದಾರೆ. ಕಳೆದ 7 ವರ್ಷದಿಂದ ತೀವ್ರ ಅಂತರ್ಯುದ್ಧದಿಂದ ನಲುಗಿರುವ ಮಧ್ಯಪ್ರಾಚ್ಯ ದೇಶ ಯೆಮನ್ ಮತ್ತಷ್ಟು ವಿಪತ್ತಿನ ದವಡೆಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯೆಮನ್ನಲ್ಲಿ ಇರಾನ್ ಬೆಂಬಲಿತ ಬಂಡುಗೋರ ಪಡೆ ರಾಜಧಾನಿ ಸನಾ ಸಹಿತ ಹಲವು ಪ್ರಮುಖ ನಗರಗಳ ಮೇಲೆ ನಿಯಂತ್ರಣ ಸಾಧಿಸಿದೆ. ಅಂತರಾಷ್ಟ್ರೀಯ ಮಾನ್ಯತೆ ಪಡೆದ ಯೆಮನ್ ಸರಕಾರಿ ಪಡೆಗೆ ಸೌದಿ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಯ ಬೆಂಬಲವಿದೆ. 2015ರ ಮಾರ್ಚ್ನಿಂದ ಯೆಮನ್ನಲ್ಲಿ ಸಂಘರ್ಷ ತೀವ್ರಗೊಂಡಿದೆ.
 
ಈ ವರ್ಷದ ಆರಂಭದಲ್ಲಿ ತೀವ್ರ ಆರ್ಥಿಕ ಕೊರತೆ ಎದುರಾದ ಹಿನ್ನೆಲೆಯಲ್ಲಿ , ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯಡಿ ಯೆಮನ್ ಜನರಿಗೆ ನೀಡುತ್ತಿರುವ ಪಡಿತರ ಆಹಾರವನ್ನು 8 ಮಿಲಿಯನ್ ಜನರಿಗೆ ಮಾತ್ರ ಸೀಮಿತಗೊಳಿಸಿದೆ. ಕುಟುಂಬಕ್ಕೆ ಪ್ರಮಾಣಿತ ದೈನಂದಿನ ಆಹಾರದ 50% ಮಾತ್ರ ಒದಗಿಸಲು ಸಾಧ್ಯವಾಗುತ್ತಿದೆ. ಈಗ ಆರ್ಥಿಕ ಕೊರತೆಯಿಂದಾಗಿ ಇನ್ನೂ 5 ಮಿಲಿಯನ್ ಜನತೆ ಬರಗಾಲದ ರೀತಿಯ ಪರಿಸ್ಥಿತಿಗೆ ಜಾರುವ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

19 ಮಿಲಿಯನ್ ಜನತೆ ಆಹಾರ ನೆರವಿನ ನಿರೀಕ್ಷೆಯಲ್ಲಿ 2022ರ ಜೂನ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಯೆಮನ್ನಲ್ಲಿನ ಮಾನವೀಯ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಬಹುದು ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಕ್ಯು) ಸೋಮವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈಗ ಸುಮಾರು 17.4 ಮಿಲಿಯನ್ ಜನತೆ ಆಹಾರದ ನೆರವಿನ ನಿರೀಕ್ಷೆಯಲ್ಲಿದ್ದರೆ 2022ರಲ್ಲಿ ಸುಮಾರು 19 ಮಿಲಿಯನ್ ಜನರು ಆಹಾರದ ನೆರವನ್ನು ಎದುರು ನೋಡಲಿದ್ದಾರೆ. ಇದರಲ್ಲಿ 7.3 ಮಿಲಿಯನ್ ಜನತೆಗೆ ಆಹಾರದ ತುರ್ತು ಅಗತ್ಯವಿರಲಿದೆ ಎಂದು ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News