ಐಸಿಸಿ ಟೆಸ್ಟ್ ರ‍್ಯಾಂಕಿಂಗ್ಸ್: ಬೌಲರ್‌ ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಬೂಮ್ರಾ

Update: 2022-03-17 03:20 GMT

ದುಬೈ: ತವರಿನಲ್ಲಿ ಪಡೆದ ತನ್ನ ಚೊಚ್ಚಲ ಐದು ಟೆಸ್ಟ್ ವಿಕೆಟ್‌ಗಳ ಬಲದೊಂದಿಗೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಬುಧವಾರ ಬಿಡುಗಡೆಗೊಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನ ಬೌಲಿಂಗ್ ವಿಭಾಗದಲ್ಲಿ ಆರು ಸ್ಥಾನ ಮೇಲಕ್ಕೆ ಜಿಗಿದು ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ. ಆದರೆ, ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಒಂಭತ್ತನೇ ಸ್ಥಾನಕ್ಕೆ ಜಾರಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಹಗಲು-ರಾತ್ರಿ ಎರಡನೇ ಟೆಸ್ಟ್ ನಲ್ಲಿ ಬೂಮ್ರಾ 8 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದರ ಬಲದೊಂದಿಗೆ ಅವರು ಟೆಸ್ಟ್ ರ್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಶಾಹೀನ್ ಅಫ್ರಿದಿ, ಕೈಲ್ ಜೇಮೀಸನ್, ಟಿಮ್ ಸೌತೀ, ಜೇಮ್ಸ್ ಆ್ಯಂಡರ್‌ಸನ್, ನೀಲ್ ವ್ಯಾಗನರ್ ಮತ್ತು ಜೋಶ್ ಹೇಝಲ್‌ವುಡ್‌ರನ್ನು ಹಿಂದಿಕ್ಕಿದ್ದಾರೆ. ಬ್ಯಾಟಿಂಗ್‌ನಲ್ಲಿ ಸಮಸ್ಯೆ ಎದುರಿಸುತ್ತಿರುವ ಮಾಜಿ ನಾಯಕ ಕೊಹ್ಲಿ ನಾಲ್ಕು ಸ್ಥಾನ ಕೆಳಕ್ಕೆ ಜಾರಿದ್ದು ಒಂಭತ್ತನೇ ಸ್ಥಾನದಲ್ಲಿದ್ದಾರೆ. ರಿಶಭ್ ಪಂತ್ ತನ್ನ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮ ತನ್ನ ಆರನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬ್ಯಾಟಿಂಗ್ ಪಟ್ಟಿಯಲ್ಲಿ ಭಾರತೀಯರೊಬ್ಬರ ಗರಿಷ್ಠ ಸ್ಥಾನವಾಗಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್‌ಗಳಲ್ಲಿ ಶ್ರೇಯಸ್ ಅಯ್ಯರ್ 92 ಮತ್ತು 67 ರನ್‌ಗಳನ್ನು ಗಳಿಸಿದ್ದರು. ಇದರ ಬಲದಿಂದ ಅವರು ಬ್ಯಾಟಿಂಗ್ ಪಟ್ಟಿಯಲ್ಲಿ 40 ಸ್ಥಾನಗಳನ್ನು ಜಿಗಿದು 37ನೇ ಸ್ಥಾನವನ್ನು ಪಡೆದಿದ್ದಾರೆ.

ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿಮೂತ್ ಕರುಣರತ್ನೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 107 ರನ್ ಗಳಿಸಿದ್ದರು. ಅದರ ಬಲದಿಂದ ಅವರು ಬ್ಯಾಟಿಂಗ್ ಪಟ್ಟಿಯಲ್ಲಿ ತನ್ನ ಜೀವನಶ್ರೇಷ್ಠ ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ, ಭಾರತದ ರವೀಂದ್ರ ಜಡೇಜ ತನ್ನ ನಂಬರ್ ಒನ್ ಸ್ಥಾನದಿಂದ ಒಂದು ಸ್ಥಾನ ಕೆಳಗೆ ಜಾರಿದ್ದಾರೆ. ವೆಸ್ಟ್ ಇಂಡೀಸ್‌ನ ಜಾಸನ್ ಹೋಲ್ಡರ್ ನಂಬರ್ ಒಂದನೇ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ರವಿಚಂದ್ರನ್ ಅಶ್ವಿನ್, ಶಾಕಿಬ್ ಅಲ್ ಹಸನ್ ಮತ್ತು ಬೆನ್ ಸ್ಟೋಕ್ಸ್ ಆಕ್ರಮಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News