ಶುಕ್ರವಾರ ಅಮೆರಿಕ-ಚೀನಾ ಅಧ್ಯಕ್ಷರ ಸಭೆ
Update: 2022-03-18 00:15 IST
ವಾಷಿಂಗ್ಟನ್, ಮಾ.17: : ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧವೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಜತೆ ಶುಕ್ರವಾರ (ಮಾ.18) ಚರ್ಚಿಸಲಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಉಭಯ ದೇಶಗಳ ನಡುವಿನ ಪೈಪೋಟಿಯನ್ನು ಸೂಕ್ತವಾಗಿ ನಿರ್ವಹಿಸುವ ಬಗ್ಗೆ ಹಾಗೂ ರಶ್ಯದ ಆಕ್ರಮಣದ ಬಗ್ಗೆ ಉಭಯ ಮುಖಂಡರು ಚರ್ಚಿಸಲಿದ್ದಾರೆ ಎಂದು ಅಮೆರಿಕದ ಶ್ವೇತಭವನದ ಹೇಳಿಕೆ ತಿಳಿಸಿದೆ. ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಖಂಡಿಸಲು ಚೀನಾ ನಿರಾಕರಿಸಿದ್ದು, ಉಕ್ರೇನ್ ಸಂಘರ್ಷಕ್ಕೆ ಅಮೆರಿಕ ಹಾಗೂ ನೇಟೊ ದೇಶಗಳ ಪೂರ್ವದತ್ತ ವಿಸ್ತರಣೆಯ ಹಂಬಲ ಕಾರಣ ಎಂದು ಆರೋಪಿಸಿದೆ. ರಶ್ಯದಿಂದ ದೂರ ಇರುವಂತೆ ಚೀನಾದ ಮೇಲೆ ಅಮೆರಿಕ ಹಾಗೂ ಅದರ ಯುರೋಪಿಯನ್ ಮಿತ್ರರಾಷ್ಟ್ರಗಳಿಂದ ತೀವ್ರ ರಾಜತಾಂತ್ರಿಕ ಒತ್ತಡ ಮುಂದುವರಿದಿದೆ. ಆದರೆ ಆಕ್ರಮಣ ಆರಂಭವಾಗಿ 3 ವಾರ ಕಳೆದರೂ, ರಶ್ಯದ ವಿರುದ್ಧ ಚೀನಾ ಯಾವುದೇ ಹೇಳಿಕೆ ನೀಡಿಲ್ಲ.