ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‍ಗೆ ಅಚ್ಚರಿಯ ಜಯ

Update: 2022-03-18 02:11 GMT

ಚೆನ್ನೈ: ಇತ್ತೀಚೆಗೆ ವಿಶ್ವದ ನಂಬರ್ ವನ್ ಬ್ಯಾಡ್ಮಿಂಟನ್ ತಾರೆ ವಿರುದ್ಧ ಜಯ ಸಾಧಿಸಿ ಹೆಸರು ಮಾಡಿದ್ದ ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಇದೀಗ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ನಂಬರ್ ಆಟಗಾರ ಆಂಡ್ರಸ್ ಅಂಟೋನ್ಸೆನ್ ಅವರನ್ನು ಬಗ್ಗುಬಡಿದಿದ್ದಾರೆ.

ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಅವರು, 21-16, 21-18 ನೇರ ಗೇಮ್‍ಗಳಿಂದ ಸೋಲಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು.

2019ರ ಬಾಸೆಲ್ ಹಾಗೂ 2021ರ ಹುಲ್ವಾ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಪದಕ ಗಳಿಸಿದ ಆಂಟೋನ್ಸೆನ್, ಲಕ್ಷ್ಮಸೇನ್ ಅವರ ನಿಖರ ಆಟಕ್ಕೆ ಸುಲಭವಾಗಿ ಮಣಿದರು.

ಅದರೆ ಮಹಿಳಾ ಸಿಂಗಲ್ಸ್ ನಲ್ಲಿ ‌ಭಾರತದ ಪಿ.ವಿ.ಸಿಂಧು, ಜಪಾನ್‍ನ ತಕಹಶಿ ವಿರುದ್ಧ ಎರಡನೇ ಸುತ್ತಿನ ಪಂದ್ಯದಲ್ಲಿ 19-21, 21-16, 17-21ರಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು.

ಕಠಿಣ ಎದುರಾಳಿ ಎನಿಸಿಕೊಂಡಿದ್ದ ಅಂಟೊನ್ಸನ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಭಾರತದ ಆಟಗಾರನ ಏಕಾಗ್ರತೆ ಭಂಗಪಡಿಸುವ ಎದುರಾಳಿಯ ತಂತ್ರ ಫಲಿಸಲಿಲ್ಲ. ಆದರೆ ಶಾಂತಚಿತ್ತದಿಂದ ಆಡಿದ ಲಕ್ಷ್ಮಸೇನ್, ಕ್ರಾಸ್‍ಕೋರ್ಟ್ ಸ್ಮಾಷ್‍ಗಳ ಮೂಲಕ ಎದುರಾಳಿ ಪದೇ ಪದೇ ತಪ್ಪೆಸಗುವಂತೆ ಮಾಡಿದರು.

ಏತನ್ಮಧ್ಯೆ ಭಾರತದ ಸೈನಾ ನೆಹ್ವಾಲ್, ಅಗ್ರ ಶ್ರೇಯಾಂಕದ ಜಪಾನ್‍ನ ಅಕಾನೆ ಯಮಗುಚಿ ವಿರುದ್ಧ ಅದ್ಭುತ ಹೋರಾಟ ಪ್ರದರ್ಶಿಸಿದರೂ, ಅಂತಿಮವಾಗಿ 14-21, 21-17, 17-21 ಗೇಮ್‍ಗಳಿಂದ ಸೋಲು ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News